

ಚಿಕ್ಕಮಗಳೂರು: ಸಾಹಿತ್ಯವನ್ನು ಜಿಲ್ಲೆಯಾದ್ಯಂತ ಪರಿಚಯಿಸಲು ಹೊಸ ಹೊಸ ಆವಿಷ್ಕಾರಗಳು ಸೃಷ್ಟಿಯಾಗಿವೆ. ಮಹಿಳಾ, ಯುವ, ಜಾನಪದ ಸೇರಿದಂತೆ ಬಹುತೇಕ ಘಟಕ ಮತ್ತು ಗೋಷ್ಠಿಗಳಿ ಗೆ ಜಿಲ್ಲೆಯು ಪ್ರಥಮ ಹೆಜ್ಜೆಯನ್ನಿಟ್ಟಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಹಿರೇಮಗಳೂರು ಗ್ರಾಮದ ದೊಡ್ಡ ಕಲ್ಯಾಣಿಯಲ್ಲಿ ಕಸಾಪ ತಾಲೂಕು ಮಹಿಳಾ, ಕಸಬಾ ಹಾಗೂ ನಗರ ಘಟಕದಿಂದ ಏರ್ಪಡಿಸಿದ್ಧ ‘ಕಲ್ಯಾಣಿಯಲ್ಲಿ ಶ್ರಾವಣ ಸಂಭ್ರಮ’ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಷತ್ತಿನಿಂದ ಜಿಲ್ಲೆಯ ತಾಲೂಕು, ಹೋಬಳಿ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿ ಯುವಕವಿಗಳು, ಲೇಖಕರು, ಬರಹಗಾರರಿಗೆ ಪ್ರೋತ್ಸಾಹಿಸುತ್ತಿದ್ದೇವೆ. ಸದ್ಯದಲ್ಲೇ ಮೂಡಿಗೆರೆ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನ ನಡೆಸಿ ಮಲೆನಾಡಿನ ಸಾಹಿತ್ಯಾಸಕ್ತರನ್ನು ಮುಂಚೂಣಿಗೆ ಕರೆ ತರುವ ಪ್ರಯತ್ನ ಮಾಡುತ್ತೇವೆ ಎಂದರು.
ಆಧುನಿಕತೆ ಜಗತ್ತಿನಲ್ಲಿ ಪೂರ್ವಿಕರ ಬಳಸುವ ಆಡುಭಾಷೆ, ಅಡುಗೆ ಕೋಣೆಯ ವಸ್ತುಗಳು, ಪದಾರ್ಥ ಗಳ ಹೆಸರು, ಜಾನಪದ ಭಾಷೆ, ಬೇಸಾಯದ ಕ್ರಮಗಳನ್ನು ಇಂದಿನ ಯುವಜನತೆಗೆ ತಿಳಿಸುವ ಮಹತ್ತರ ಅಭಿಯಾನ ಹಮ್ಮಿಕೊಂಡು ಹಿಂದಿನ ಸಂಸ್ಕೃತಿಯನ್ನು ಎಲ್ಲೆಡೆ ಹಬ್ಬಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಶಿಕ್ಷಕಿ ನಾಗಶ್ರೀ ತ್ಯಾಗರಾಜ್ ವಿಶೇಷ ಉಪನ್ಯಾಸ ನೀಡಿ, ಕಲ್ಯಾಣಿ ಎಂದಾಕ್ಷಣ ಲಾವಣಿ ಗೀತೆಗಳು ನೆನಪಿಗೆ ಬರಲಿವೆ. ಹೀಗಾಗಿ ಕಸಾಪ ಮುಂದೆ ಲಾವಣಿ ಗೀತೆಗಳ ಗಾಯನದ ಕಾರ್ಯಕ್ರಮ ನಡೆಸಲಿ. ಡಿವಿಜಿಯವರು ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಮಂಕುತಿಮ್ಮನ ಕಗ್ಗ ಹೊರತಾಗಿ ಬೇರೆ ಚರ್ಚೆಗಳಾಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ತಾಲೂಕು ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮೀ , ಮನೆಯಂಗಳದಿ ಸೀಮಿತವಾಗಿದ್ಧ ಶ್ರಾವಣ ಮಾಸವು ಇಂದು ಪರಿಸರದೊಂದಿಗೆ ಆಚರಿಸುತ್ತಿರುವುದು ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ಮಹಿಳಾ ಜಿಲ್ಲಾಧ್ಯಕ್ಷೆ ನಿರ್ಮಲ ಮಂಚೇಗೌಡ, ಕಸಾಪ ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ನಗರಾಧ್ಯಕ್ಷ ಸಚಿನ್‌ಸಿಂಗ್, ಸಾಹಿತಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.