

ಚಾಮರಾಜನಗರ: ಕನ್ನಡಿ ಕವನ ಸಂಕಲನವು ಜನಜೀವನಕ್ಕೆ ದಾರಿ ತೋರಿಸುವ ಒಂದು ಮಾರ್ಗದರ್ಶಕ ಕಾವ್ಯವಾಗಿದ್ದು, ಸಾಹಿತ್ಯ ಜನಜೀವನದ ಪ್ರತಿಬಿಂಬವೇ ಆಗಿದೆ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನ್ನಡ ವಿಭಾಗ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ, ಒಲುಮೆಯ ಗೂಡು, ಚಾಮರಾಜನಗರ, ವೆಂಕಟಯ್ಯಛತ್ರ ಸರ್ಕಾರಿ ಪದವಿಪೂರ್ವ ಕಾಲೇಜಿನ 1996ನೇ ಸಾಲಿನ ಎಸ್‌ಎಸ್‌ಎಲ್‌ಸಿಯ ಹಿರಿಯ ವಿದ್ಯಾರ್ಥಿಗಳ ವೃಂದದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡಿ ಕೃತಿಯ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ದಲಿತ ಸಮುದಾಯದ ಜನಜೀವನ, ಆಚಾರ-ವಿಚಾರ, ನೋವು, ಸಂಕಷ್ಠ ಏನಿದೆ ಅನ್ನುವುದನ್ನು ಕನ್ನಡಿ ರೂಪದಲ್ಲಿ ಪ್ರತಿಬಿಂಬಿಸುತ್ತದೆ. ಸಾಹಿತ್ಯ ಬರೀ ಪ್ರತಿಬಿಂಬವಾದರೆ ಸಾಲದು. ಸಾಹಿತ್ಯ ಗತಿಬಿಂಬವೂ ಹೌದು, ಎಲ್ಲ ಸಮಸ್ಯೆಗಳನ್ನಿಟ್ಟುಕೊಂಡು ನಾವು ಯಾವ ದಾರಿಯಲ್ಲಿ ಹೋಗಬೇಕು ಎಂಬ ಮಾರ್ಗ ತೋರಿಸುವುದುಸಾಹಿತ್ಯವಾಗಿದೆ. ಕವನ ಸಂಕಲನವು ಸಾರ್ವಜನಿಕ ಗ್ರಂಥಾಲಯದ ಪುಸ್ತಕ ಖರೀದಿ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿರುವುದು ಬಹಳ ಸಂತೋಷಕರವಾಗಿದೆ ಎಂದರು.
ಸಾಹಿತಿ ಹರದನಹಳ್ಳಿ ನಂಜುಂಡಸ್ವಾಮಿ ಮಾತನಾಡಿ,ಶಂಕರ ಅಂಕನಶೆಟ್ಟಿಪುರಅವರು ಬರೆದಿರುವ ಕನ್ನಡಿ ಕವನಗಳನ್ನು ಹೃದಯದೊಳಗಿಟ್ಟುಕೊಂಡರೆ ಮಾತ್ರ ಅರ್ಥ ಸಿಗುತ್ತದೆ. ಇಡೀ ಭಾರತೀಯ ಸಾಹಿತ್ಯ, ಇಡೀ ಕನ್ನಡ ಸಾಹಿತ್ಯವನ್ನು ನಾವು ನೋಡಿದಾಗ ತಲೆಯ ಸಂಸ್ಕೃತಿ ಸಾಹಿತ್ಯವನ್ನು ನೋಡುತ್ತಾ ಬರುತ್ತೇವೆ. ಆದರೆ ಕುವೆಂಪು ಅವರು ಬರೆದಿರುವ ಶ್ರೀರಾಮಯಾಣ ದರ್ಶನಂ ಎದೆಯಕಾವ್ಯವಾಗಿದೆ. ಕನ್ನಡಿ ಕಾವ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ಎದೆಯ ಸಂಸ್ಕೃತಿ ಗೊತ್ತಿದ್ದರೆ ಮಾತ್ರ ಅರ್ಥ ಮಾಡಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲೆ ಡಾ.ಆರ್.ಎಸ್.ಅಶ್ವಿನಿ, ಕವಿ ಸಿ.ಶಂಕರ ಅಂಕನಶೆಟ್ಟಿಪುರ, ಕನ್ನಡ ವಿಭಾಗದ ಮುಖ್ಯಸ್ಥ ಎ.ಎಂ.ಶಿವಸ್ವಾಮಿ, ಉದ್ಯಮಿ ಎಚ್.ಡಿ.ಪ್ರತಾಪ್, ಹೋರಾಟಗಾರ ಪಿ.ಸಂಘಸೇನಾ, ಸಾಹಿತಿ ಬಸವಣ್ಣ, ಜಿ.ಕೆ.ದೀಪಿತಾ, ಸಾವಯವ ಕೃಷಿಕ ವಿ.ನಟರಾಜು, ನಮ್ಮನೆ ಪ್ರಶಾಂತ್, ಶಿವಶಂಕರ್ ಚಟ್ಟು, ಡಿ.ಎನ್.ಉಷಾ, ಪದ್ಮಾಕ್ಷಿ, ಕೋಮಲ, ರೇಷ್ಮಾ, ರಮೇಶ್, ಮಲ್ಲು ಇತರರು ಹಾಜರಿದ್ದರು.