ಸಾಹಿತ್ಯ ಚಟುವಟಿಕೆ ನಿರಂತರ ನಡೆಯಲಿ

13 yerriswamy 01
Published on

ಬಳ್ಳಾರಿ : ಜಿಲ್ಲೆಯ ಈ ನೆಲದಲ್ಲಿ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದು ಅರಿವು ಸಂಸ್ಥೆ ಮುಖ್ಯಸ್ಥ ಸಿರಿಗೇರಿ ಪನ್ನರಾಜ್ ಹೇಳಿದರು.
ನಗರದ ವೀ. ವಿ. ಸಂಘದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಅರಿವು ಸಂಸ್ಥೆಯಿಂದ ಭಾನುವಾರ ನಡೆದ ಸಂಗಂ ಸಾಹಿತ್ಯ ಪುರಸ್ಕಾರ - 2 ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಈ ಭಾಗದ ವಿದ್ಯಾರ್ಥಿಗಳ ಸಮೂಹಕ್ಕೆ ಸಾಹಿತ್ಯ ಹಾಗೂ ಕಥಾ ಕಮ್ಮಟವನ್ನು ಸಂಘಟಿಸಿಬೇಕು. ಅವರಿಗೆ ಕಥೆ ಬರೆಯುವ ಆಸಕ್ತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಅರಿವು ಸಂಸ್ಥೆ ಸಹಕಾರ ನೀಡಲಿದೆ ಎಂದು ಹೇಳಿದರು.
ನ್ಯಾಷನಲ್ ಬುಕ್ ಟ್ರಸ್ಟ್‌ನ ಡಾ. ಪತ್ತಿಪಾಕ ಮೋಹನ ಮಾತನಾಡಿ, ವಿದ್ಯಾರ್ಥಿಗಳಿಗೆ ಕಥೆ-ಕಾವ್ಯಗಳನ್ನು ಓದುವ ಆಸಕ್ತಿ ಬೆಳೆಸುವುದರ ಜೊತೆಗೆ, ಅವರಲ್ಲಿನ ಬರವಣಿಗೆಯ ಶಕ್ತಿಯನ್ನು ಕೆದಕಿ ತೆಗೆಯಬೇಕು. ಹೆಚ್ಚು ಹೆಚ್ಚು ಕಥೆಗಳನ್ನು ಓದಲು ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸ್ಕಾರಕ್ಕೆ ಆಹ್ವಾನಿಸಿದ್ದ ಕೃತಿಗಳಲ್ಲಿ ಅಂತಿಮ ಹಂತ ತಲುಪಿದ್ದ ಐದು ಕೃತಿಗಳ ಪೈಕಿ ಅನುಪಮಾ ಅವರ ಚೋದ್ಯ (ಕಥಾ ಸಂಕಲನ) ಕೃತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಯಿತು. ಲೇಖಕಿ ಅನುಪಮಾ ಪ್ರಸಾದ್ ಅವರಿಗೆ ’ಸಂಗಂ’ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತೀರ್ಪುಗಾರರಾದ ಲೇಖಕ ಟಿ. ಎಸ್. ಗೊರವರ, ಕೇಶವ ಮಳಗಿ, ಜ.ನಾ. ತೇಜಸ್ವಿ , ಪ್ರಶಸ್ತಿಗೆ ಅಂತಿಮ ಸುತ್ತಿಗೆ ಆಯ್ಕೆಗೊಂಡ ಯುವ ಲೇಖಕರಾದ ಸ್ವಾಮಿ ಪೊನ್ನಾಜಿ, ದಯಾನಂದ, ಸಂಪತ್ ಸಿರಿಮನೆ, ಅನಿಲ್ ಗುನ್ನಾಪುರ, ಲೇಖಕ ಡಾ.ದಸ್ತಗೀರ ಸಾಬ್ ದಿನ್ನಿ, ಡಾ.ಶಿವಲಿಂಗಪ್ಪ ಹಂದ್ಯಾಳು, ವೀರೆಂದ್ರ ರಾವಿಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net