ಸಾಹಿತ್ಯ ಕ್ಷೇತ್ರದ ಸೇವೆಗೆ ಪಣತೊಡೋಣ

03hbd1
Published on

ಹಳೇಬೀಡು: ಗುಣಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದ ಸೇವೆ ಮಾಡಲು ನಾವೆಲ್ಲರೂ ಪಣತೊಡೋಣ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಷಿ ಹೇಳಿದರು.
ಸಮೀಪದ ಪುಷ್ಪಗಿರಿ ಮಠದ ಕಲಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಸಾಪ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊದಲ ಬಾರಿಗೆ ರಾಜಧಾನಿಯ ಹೊರಗೆ ಗ್ರಾಮೀಣ ಪ್ರದೇಶದಲ್ಲಿ ಪರಿಷತ್ತಿನ ಸರ್ವ ಸದಸ್ಯರ ಸಭೆಯನ್ನು ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಯುರೋಪಿಯನ್ನರು ನಾಗರಿಕತೆಯ ಅರಿವಿಲ್ಲದೆ ಬದುಕುತ್ತಿದ್ದ ಕಾಲದಲ್ಲಿ ಕನ್ನಡ ನಾಡಿನಲ್ಲಿ ಪಂಪ, ರನ್ನ, ಜನ್ನ, ರಾಘವಾಂಕರಂತಹ ಸಾಹಿತ್ಯ ಶಿರೋಮಣಿಗಳಿದ್ದರು. ಶಬ್ದಮಣಿದರ್ಪಣ, ವಿಕ್ರಮಾರ್ಜುನ ವಿಜಯ ದಂತಹ ಕಾವ್ಯಗಳು ರಚನೆಯಾಗಿದ್ದವು. ಮಹಾನ್ ಕೃತಿಗಳು ಹಳ್ಳಿಯೊಂದರ ದೇಗುಲ ಅಥವಾ ಅರಳಿಕಟ್ಟೆಯ ನೆರಳಿನಲ್ಲೇ ಬಹುಪಾಲು ರಚನೆಯಾದವು. ಹಾಗಾಗಿ ಸಾಹಿತ್ಯದ ಏಳಿಗೆ ಗ್ರಾಮೀಣ ಪ್ರದೇಶದಿಂದಲೇ ಮರು ಆರಂಭವಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಾನ್ನಿಧ್ಯ ವಹಿಸಿದ್ದ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಾಯ್ನೆಲದ ಪರಂಪರೆಯನ್ನು ಅಲ್ಲಿನ ಭಾಷೆಯ ಮೂಲಕ ಗುರುತಿಸಬೇಕಾಗುತ್ತದೆ. ಪ್ರಾಚೀನ ನುಡಿಗಳು ನಾಗರಿಕತೆ ಬೆಳೆದು ಬಂದ ಹಾದಿಯನ್ನು ತಿಳಿಸುತ್ತದೆ. ಹಾಗಾಗಿ ಭಾಷೆಗಳ ಮೇಲಿನ ಸಂಶೋಧನೆ ಎಂದಿಗೂ ನಿಲ್ಲಬಾರದು.ಪರಿಷತ್ತಿನ ಚಟುವಟಿಕೆಗಳು ರಾಜಕೀಯದ ಹಿಡಿತಕ್ಕೆ ಒಳಪಡದೆ ಸ್ವತಂತ್ರ ಆಲೋಚನೆಯನ್ನು ಇಟ್ಟುಕೊಂಡು ಮುಂದುವರಿಯಬೇಕು. ಈ ನಿಟ್ಟಿನಲ್ಲಿ ಅಧ್ಯಕ್ಷರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಮೂಲೆಗಳಿಂದ ಬಂದಿರುವ ಪರಿಷತ್ತಿನ ನೂರಾರು ಸದಸ್ಯರನ್ನು ಪುಷ್ಪಗಿರಿಯಲ್ಲಿ ಕಂಡು ಧನ್ಯತಾ ಭಾವ ಮೂಡಿದೆ. ಮುಂದಿನ ದಿನಗಳಲ್ಲಿ ಕಸಾಪ ಏಳಿಗೆಗೆ ಇನ್ನಷ್ಟು ಸಹಕಾರ ನೀಡಲಾಗುವುದು. ಜತೆಗೆ ಮಠದ ವತಿಯಿಂದಲೂ ವಿವಿಧ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಪರಿಷತ್ತಿನ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net