

ಬೇಲುರು: ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಸಾಹಿತಿ ಶತ ನಾಟಕ ರಚನೆಕಾರ ದಿ.ಬೇಲೂರು ಕೃಷ್ಣಮೂರ್ತಿ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಯಣ್ಣಗೌಡ ಹೇಳಿದರು.
ಸಾಹಿತಿ ದಿ.ಬೇಲೂರು ಕೃಷ್ಣಮೂರ್ತಿ ಅವರ 92ನೇ ಜನ್ಮದಿನವ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ಶ್ರೀಚನ್ನಕೆಶವಸ್ವಾಮಿ ದಾಸೋಹ ಭವನದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಟಕ, ಕಾದಂಬರಿ, ಕಥೆ, ಜೀವನ ಚರಿತ್ರೆ. ಲೇಖನ ಮತ್ತು ಯಕ್ಷಿಣಿ ವಿದ್ಯೆ, ಜತೆಗೆ ತಮ್ಮಲ್ಲಿನ ವೈಜ್ಞಾನಿಕ ಮನೋಭಾವವನ್ನು ಸಾಹಿತ್ಯದ ಮೂಲಕ ಮತ್ತು ಸ್ವಯಂ ಪ್ರಯೋಗದೊಂದಿಗೆ ನಾಡಿಗೆ ತಿಳಿಸಿದ ಕೀರ್ತಿ ಸಾಹಿತಿ ಬೇಲೂರು ಕೃಷ್ಣಮೂರ್ತಿ ಅವರಿಗೆ ಸಲ್ಲುತ್ತದೆ. ಬೇಲೂರಿಗೆ ಆಗಮಿಸಿದ್ದ ವೈಕುಂಠ ದಾಸರ ಚರಿತ್ರೆಯನ್ನು ನಾನು ಹಾಗೂ ಅವರು ಸೇರಿ ರಚಿಸಿದ್ದೆವು. ಅವರ 90ನೇ ಜನ್ಮದಿನವನ್ನು ನಾಟಕೋತ್ಸವದ ರೀತಿಯಲ್ಲಿ ಮಾಡಬೇಕೆಂದು ಅಭಿಮಾನಿಗಳು ಮುಂದಾಗಿದ್ದರು. ಆದರೆ ಅವರ ಅಗಲಿಕೆಯಿಂದ ಅದು ಸಾಧ್ಯವಾಗಲಿಲ್ಲ. ಆದರೆ ಅವರು ಹಾಕಿ ಕೊಟ್ಟ ದಾರಿಯಲ್ಲಿ ಇಂದು ಸಾಕಷ್ಟು ಯುವ ಸಾಹಿತಿಗಳು ನಡೆದು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಬಿ.ಎಲ್.ರಾಜೇಗೌಡ ಮಾತನಾಡಿ, ಬೇಲೂರು ಕೃಷ್ಣಮೂರ್ತಿ ಅವರು ಒಬ್ಬ ದೈಹಿಕ ಶಿಕ್ಷಣ ಶಿಕ್ಷಕರಾಗಿ ವೈಜ್ಞಾನಿಕ ಮತ್ತು ವೈಚಾರಿಕತೆ ಮನೋಭಾವಯನ್ನು ಸಾಹಿತ್ಯ ಮೂಲಕ ಇಂದಿನ ಯುವ ಜನಾಂಗಕ್ಕೆ ನೀಡಿದ್ದಾರೆ. ಅವರ ಸಮಯ ಪಾಲನೆ ಇಂದಿಗೂ ಇತರರಿಗೆ ಮಾದರಿಯಾಗಿದೆ. ಅವರು ಬೇಲೂರಿನಲ್ಲಿ ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ, ನಿವೃತ್ತ ಸರ್ಕಾರಿ ನೌಕರರ ಭವನ ಕೂಡ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ನಾಡಿನ ಹಲವು ಮಹಾನ್ ಪುರುಷರ ಜೀವನ ಚರಿತ್ರೆ ಬರೆದಿದ್ದಾರೆ. ಕೃಷ್ಣಮೂರ್ತಿ ಅವರು ಸಾಹಿತ್ಯ, ಜನಪರ, ಶಿಕ್ಷಣ, ಪರಿಸರ, ಯಕ್ಷಿಣಿ ಹತ್ತು ಹಲವು ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ತಾಲೂಕು ಕಸಾಪ ಅವರ ಕೊಡುಗೆಯನ್ನು ಸ್ಮರಿಸುತ್ತದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸಾಹಿತಿ ಬೇಲೂರು ಕೃಷ್ಣಮೂರ್ತಿ ಅವರ ಭಾವಚಿತ್ರಕ್ಕೆ ಗಣ್ಯರು ಮತ್ತು ಅಭಿಮಾನಿಗಳು ಪುಷ್ಪನಮನ ಸಲ್ಲಿಸಿದರು.
ತಾಲೂಕು ಜನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಎಸ್. ಸಿದ್ದೇಗೌಡ, ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಗೌರವ ಕಾರ್ಯದರ್ಶಿ ಆರ್.ಎಸ್.ಮಹೇಶ್, ಕೋಶಾಧ್ಯಕ್ಷ ಮಾ.ನ.ಮಂಜೇಗೌಡ, ಪುರಸಭಾ ಸದಸ್ಯ ಅಶೋಕ್, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ್, ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಸೇರಿದಂತೆ ಇತರರಿದ್ದರು.