

ಶೃಂಗೇರಿ: ಸಾಹಿತ್ಯ ಎಂಬುದು ಅನುಭವಗಳನ್ನು ವಿವರಿಸಲು, ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ವಿಷಯಗಳನ್ನು ಅನ್ವೇಷಿಸಲು ಭಾಷೆ ಬಳಸುವ ಕಲಾಪ್ರಕಾರವಾಗಿದೆ ಎಂದು ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ ಹೇಳಿದರು.
ಶನಿವಾರ ತಾಲೂಕು ಮಹಿಳಾ ಘಟಕ ಆಯೋಜಿಸಿದ್ದ ಸಾಹಿತ್ಯ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯವು ವ್ಯಕ್ತಿಯ ಬೌದ್ಧಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಗೆ ಅಗತ್ಯವಾಗಿದೆ. ಸಾಹಿತ್ಯ ಸಂಸ್ಕೃತಿಯನ್ನು ರಕ್ಷಿಸುತ್ತದೆ. ಮಾನವ ಸಂಬಂಧಗಳನ್ನು ಆಳವಾಗಿಸಲು, ಸೃಜನಾತ್ಮಕತೆ ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದರು.
ಸಾಹಿತ್ಯ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಿರಿಯ ಸಾಹಿತಿಗಳ ಆಶೋತ್ತರಗಳು, ಚಿಂತನೆಗಳನ್ನು ನಾವು ಮತ್ತೊಬ್ಬರ ಜತೆ ಹಂಚಿಕೊಂಡಾಗ ಮಾತ್ರ ಸಾಹಿತ್ಯ ಮೌಲ್ಯಗಳ ಉನ್ನತ ಉದ್ದೇಶಗಳು ಎಲ್ಲರನ್ನೂ ತಲುಪಲು ಸಾಧ್ಯ ಎಂದರು.
ಮೂಲ್ಕಿ ಸಾಹಿತಿ ಪ್ರೇಮಾ ಆರ್. ಶೆಟ್ಟಿ ಮಾತನಾಡಿ, ಶೃಂಗೇರಿ ಹಾಗೂ ಕಾಸರಗೋಡನ್ನು ಸಾಹಿತ್ಯಕವಾಗಿ ಒಗ್ಗೂಡಿಸುವ ಕಾರ್ಯ ನಿರಂತರ ನಡೆಯುವ ಆಶಯ ನಮ್ಮದು. ಸಾಹಿತ್ಯದ ಅನುಭವಗಳ ಶ್ರೇಷ್ಠ ಮೌಲ್ಯಗಳನ್ನು ಬೆಳೆಸುವಲ್ಲಿ ಶೃಂಗೇರಿ ತಾಲೂಕು ಕಸಾಪ ಅವಿರತವಾಗಿ ಶ್ರಮಿಸುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕ್ರಿಯಾಶೀಲ ಕಸಾಪ ಘಟಕ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಅಸ್ತಿತ್ವ ಛಾಪು ಮೂಡಿಸಿ ಸಮಾಜದ ಸಾಂಸ್ಕೃತಿಕ ನೆಲೆಗಟ್ಟನ್ನು ಮತ್ತಷ್ಟು ಉನ್ನತಕ್ಕೆ ಏರಿಸಬೇಕಿದೆ ಎಂದರು.
ಪೆರ್ಲ ಸವಿಹೃದಯ ಕವಿಮಿತ್ರರು ವೇದಿಕೆಯಿಂದ ಕವಿ ಕಿಯಾರ ಕಿಞ್ಞಣ್ಣ ರೈ ಹಾಗೂ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಭಾವಚಿತ್ರವನ್ನು ಕನ್ನಡಭವನಕ್ಕೆ ಕೊಡುಗೆಯಾಗಿ ನೀಡಿದರು.
ವೇದಿಕೆ ಸಂಚಾಲಕರಾದ ಸುಭಾಷ್ ಪೆರ್ಲ, ಸದಸ್ಯರಾದ ಕೃಷ್ಣ ದರ್ಬೆತ್ತಡ್ಕ, ಬಾಲಕೃಷ್ಣ ಏಳ್ಕಾನ, ನಳಿನಿ, ಶೂನ್ಯ ರಮೇಶ್, ಕೆ.ಪಿ.ಆನಂದಸ್ವಾಮಿ ಇತರರಿದ್ದರು.