

ಮೈಸೂರು: ಸಾಹಿತಿಗಳು ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಬೇಕು. ಇದರಿಂದ ಚಿತ್ರರಂಗಕ್ಕೆ ಘನತೆ ಮತ್ತು ತೂಕ ಬರುತ್ತದೆ ಎಂದು ಚಲನಚಿತ್ರ ನಿರ್ದೇಶಕ, ಸಾಹಿತಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಮಾನಸಗಂಗೋತ್ರಿಯ ಮಾನವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಕನ್ನಡ ಸಾಹಿತ್ಯ ಮತ್ತು ಚಿತ್ರಕಥೆ ಬರವಣಿಗೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸಿನಿಮಾ ಮತ್ತು ಸಾಹಿತಿಗಳ ನಡುವೆ ದೊಡ್ಡ ಗೋಡೆ ನಿರ್ಮಾಣವಾಗಿದೆ. ಒಂದು ರೀತಿ ಅಸ್ಪಶ್ಯತೆಯಂತಿದೆ. ‘ಸಿನಿಮಾ ನನಗೆ ಅಲ್ಲ’ ಎನ್ನುತ್ತಾರೆ ಸಾಹಿತಿಗಳು. ‘ಚಿತ್ರರಂಗಕ್ಕೆ ಸಾಹಿತಿಗಳು ಹೊಂದಾಣಿಕೆಯಾಗಲ್ಲ’ ಎನ್ನುತ್ತಾರೆ ಸಿನಿಮಾದವರು. ಇದು ನಿವಾರಣೆಯಾಗಿ ಎರಡು ಕ್ಷೇತ್ರಗಳ ನಡುವೆ ಸುವರ್ಣ ಸೇತುವೆ ಸೃಷ್ಟಿಯಾಗಬೇಕು ಎಂದು ಹೇಳಿದರು.
ಸಾಹಿತ್ಯ-ಸಿನಿಮಾ ಕ್ಷೇತ್ರಕ್ಕೆ ಸಾಮಾಜಿಕ ಜವಾಬ್ದಾರಿ ಇದೆ. ಈ ಮಾಧ್ಯಮಗಳೆರಡಲ್ಲಿ ಯಾವುದು ಕನಿಷ್ಠವೂ ಅಲ್ಲ, ಯಾವುದೂ ಶ್ರೇಷ್ಠವಲ್ಲ. ಕಳಪೆ ಸಾಹಿತ್ಯದಂತೆ ಸಿನಿಮಾದಲ್ಲೂ ಇರುತ್ತದೆ. ಈ ಹಿಂದೆಯೇ ಉಭಯ ಕ್ಷೇತ್ರಗಳು ಒಟ್ಟಿಗೆ ಕೆಲಸ ಮಾಡಿರುವ ಉದಾಹರಣೆಗಳಿವೆ. ಈ ರೀತಿ ಕೆಲಸ ಕೇರಳ, ತಮಿಳುನಾಡಿನಲ್ಲೂ ಆಗಿದೆ. ಇದು ಕನ್ನಡ ನೆಲದಲ್ಲೂ ಆಗಬೇಕು. ಸಾಹಿತಿಗಳ ಪ್ರವೇಶದಿಂದ ಚಿತ್ರರಂಗಕ್ಕೆ ಹೊಸತನ ಮತ್ತು ಹೊಸ ಆಯಾಮ ದೊರೆಯಲಿದೆ ಎಂದು ಹೇಳಿದರು.
ಸಾಹಿತ್ಯದಲ್ಲಿ ಶೇ.95 ವಿಚಾರ, ಶೇ.5 ವ್ಯವಹಾರ ಇರುತ್ತದೆ. ಸಿನಿಮಾದಲ್ಲಿ ಇದು ಉಲ್ಟಾ. ಇಲ್ಲಿ ಶೇ.95 ವ್ಯವಹಾರ, ಶೇ.5 ವಿಚಾರ ಇದೆ. ಕವಿಗೆ ಒಂದು ಪೆನ್ಸಿಲ್, ಕಾಗದ ದೊರೆತರೆ ಅದ್ಭುತ ಕಾವ್ಯ ರಚಿಸಬಲ್ಲ. ಆದರೆ, ಸಿನಿಮಾಗಳಿಗೆ ದೊಡ್ಡ ಆರ್ಥಿಕ ಭಾರ ಇದೆ. ವ್ಯವಹಾರದ ಜ್ಞಾನ ತಿಳಿದುಕೊಂಡೇ ಹೆಜ್ಜೆ ಇಡಬೇಕು. ಹಣ ಕೊಟ್ಟ ನಂತರವೇ ಚಿತ್ರಮಂದಿರಕ್ಕೆ ಪ್ರವೇಶ ನೀಡಲಾಗುತ್ತದೆ. ಈ ವ್ಯಾಕರಣದ ಬಗ್ಗೆ ತಿಳಿದಿರಬೇಕು ಎಂದು ಯುವ ಸಾಹಿತಿಗಳಿಗೆ ಕಿವಿಮಾತು ಹೇಳಿದರು.
ಕಥೆ, ಕಾದಂಬರಿ ಬರೆಯುವಾಗ ಸಿನಿಮಾಗಾಗಿ ಬರೆಯದೇ ಸಾಹಿತ್ಯದ ಬದ್ಧತೆ, ಸಾಹಿತ್ಯದ ವ್ಯಾಕರಣ, ಇವತ್ತಿನ ಪ್ರಸ್ತುತತೆ ಗಮನಿಸಿ ಬರೆಯಬೇಕು. ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಎಂದಾಗ ಯಥಾವತ್ ಸಿನಿಮಾದಲ್ಲಿ ಬಳಸಲಾಗುವುದಿಲ್ಲ. ಶ್ರೇಷ್ಠ ಕೃತಿಯೆಂದೂ ಸಿನಿಮಾದಲ್ಲಿ ಭಟ್ಟಿ ಇಳಿಸಲೂ ಆಗಲ್ಲ. ಸಿನಿಮಾದ ವ್ಯಾಕರಣವೇ ಬೇರೆ ಎಂದರು.
ಬರಹಗಾರ ತನ್ನ ಅನುಭವ, ಕಲ್ಪನೆಗಳನ್ನು ಸಮನ್ವಯಗೊಳಿಸಿ ಕೃತಿ ರಚಿಸುತ್ತಾನೆ. ಆದರೆ, ಸಿನಿಮಾ ಸಮೂಹ ಕಲೆ. ನಿರ್ದೇಶಕ ತನ್ನೊಂದಿಗೆ ಹತ್ತಾರು ಜನರನ್ನು ಕಟ್ಟಿಕೊಳ್ಳುತ್ತಾನೆ. ಜತೆಗೆ, ಹತ್ತಾರು ಸಮಸ್ಯೆ, ಸವಾಲು, ತಾಂತ್ರಿಕ ವಿಚಾರಗಳನ್ನೂ ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದರು.
ಸಿನಿಮಾ ದೊಡ್ಡ ಜವಾಬ್ದಾರಿ ಬರಹಗಾರನ ಕಲ್ಪನೆಯನ್ನು ಸಾಧ್ಯವಾದಷ್ಟು ಸತ್ಯಕ್ಕೆ ಮತ್ತು ವಾಸ್ತವಕ್ಕೆ ಹತ್ತಿರವಾದದ್ದನ್ನು ದೃಶ್ಯರೂಪದಲ್ಲಿ ಹೇಳಬೇಕು. ಚಿತ್ರಕ್ಕೆ ಶಕ್ತಿಯಿರುವ ಕಥೆ, ಕಾದಂಬರಿಗಳು ಸಿನಿಮಾಕ್ಕೆ ಅಳವಡಿಕೆಯಾಗುತ್ತವೆ. ಅನೇಕ ಅತ್ಯುತ್ತಮ ಕಾದಂಬರಿಗಳು ಸಿನಿಮಾ ಆಗಲ್ಲ. ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿಯಲ್ಲಿ ದ್ರೌಪದಿ ಸ್ವಗತ 25 ಪುಟ ಇದೆ. ಇದನ್ನು ಸಿನಿಮಾದಲ್ಲಿ ಹೇಗೆ ತೋರಿಸಲು ಸಾಧ್ಯ? ಒಳ್ಳೆಯ ಸಾಹಿತ್ಯ ಕೃತಿಗಳು ಸಿನಿಮಾ ಆಗಬೇಕೆಂದು ಹಠ ಹಿಡಿಯಲು ಆಗಲ್ಲ ಎಂದರು.
ಸಿನಿಮಾ ನಿರ್ದೇಶಕರು ಸಾಹಿತ್ಯ ಕೃತಿ ಆಯ್ಕೆ ಮಾಡಿದಾಗ ಲೇಖಕರೊಂದಿಗೆ ಮುಕ್ತ ಸಂವಾದ ಮಾಡಬೇಕು. ಬದಲಾವಣೆ ಮಾಡುವ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ಎಲ್ಲೆಲ್ಲಿ ಬದಲಾವಣೆ ಮಾಡುತ್ತೇನೆ ಎಂಬುದನ್ನು ವಿವರಿಸಬೇಕು.
ಸಾಹಿತ್ಯ ಮತ್ತು ನಾಟಕಗಳಿಗಿಲ್ಲದ ಸೆನ್ಸಾರ್ ಸಿನಿಮಾಗಳಿಗೆ ಇದೆ. ಕುಚೇಷ್ಟೆ ಮಾಡುತ್ತಾರೆಂದು ಸರ್ಕಾರ ಕಣ್ಣಿಟ್ಟಿರುತ್ತದೆ. ಸೆನ್ಸಾರ್ ಮಂಡಳಿ ಎಷ್ಟೇ ಚಾಪೆ ಹಾಸಿದರೂ ರಂಗೋಲಿ ಕೆಳಗೆ ನುಸುಳುವುದು ಸಿನಿಮಾದವರಿಗೆ ಕರಗತವಾಗಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಓದಿದರೆ ಜಗತ್ತು ನೋಡುವ ರೀತಿ ಬದಲಾಗುತ್ತೆ. ದಟ್ಟ ಕಾಡಿನ ಅನುಭವ ಸಿಗುತ್ತದೆ. ರಾಮಾಯಣ ಓದುವಾಗ ಬೇರೆ ಬೇರೆ ರಾಮ ನಮ್ಮೊಳಗೆ ಹುಟ್ಟುತ್ತಾನೆ. ಆದರೆ, ದೃಶ್ಯ ಮಾಧ್ಯಮದಲ್ಲಿ ಇವನೇ ರಾಮ ಎಂದು ನಟನನ್ನು ತೋರಿಸಿ ನಂಬಿಸಲಾಗುತ್ತದೆ. ಕನ್ನಡಿಗರಿಗೆ ಕೃಷ್ಣದೇವರಾಯ, ಮಯೂರ ಎಂದರೆ ರಾಜಕುಮಾರ್ ನೆನಪಾಗುತ್ತಾರೆ. ಆ ಇಬ್ಬರು ರಾಜರು ಹೇಗಿದ್ದರೂ ನೆನಪಿಗೆ ಬರುವುದಿಲ್ಲ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಮಾನವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ.ಎಸ್.ಎಸ್.ಮಾಲಿನಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಇದ್ದರು.