ಸಾಹಿತಿಗಳು ಅನ್ಯಾಯಗಳ ವಿರುದ್ಧ ದನಿ ಎತ್ತಬೇಕು

24-pnp 2
Published on

ಪಾಂಡವಪುರ : ಬರಹಗಾರರು, ಸಾಹಿತಿಗಳು ಅನ್ಯಾಯಗಳ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಕವಿ ಟಿ.ಸತೀಶ್ ಜವರೇಗೌಡ ಹೇಳಿದರು. ಪಟ್ಟಣದ ಕೃಷ್ಣನಗರದ ಬಾಲ ಶನೈಶ್ಚರ ಭಕ್ತಮಂಡಳಿ ಕಾರ್ತಿಕ ಮಾಸದ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಲಕ್ಷ ದೀಪೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾವ್ಯ ಸಂಗಮ- ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಕವಿ, ಸಾಹಿತಿ ಮತ್ತು ಬರಹಗಾರರು ಜಾತ್ಯತೀತ, ಧರ್ಮಾತೀತಾವಾಗಿ ಬರೆದರೆ ಸಾಲದು. ಬರೆದ ರೀತಿಯಲ್ಲೇ ನಡೆದುಕೊಳ್ಳಬೇಕು. ಜತೆಗೆ ಸಮಾಜದ ಅಂಕು-ಡೊಂಕುಗಳು ಮತ್ತು ಅನ್ಯಾಯದ ವಿರುದ್ಧ ಕಾವ್ಯದ ಮೂಲಕ ಖಂಡಿಸಿ ತಣ್ಣಗೆ ಕುಳಿತುಕೊಳ್ಳಬಾರದು. ಅನ್ಯಾಯ ನಡೆದಾಗ ಪಲಾಯನ ಮಾಡದೆ ಹೋರಾಟ ನಡೆಸಬೇಕು. ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕನ್ನಡ ಸಾಹಿತ್ಯವು ಸಮೃದ್ಧವಾಗಿದೆ. ತನ್ನದೇ ಆದ ಚಾರಿತ್ರಿಕ ಹಿರಿಮೆ ಹೊಂದಿದೆ. ಸಾಹಿತ್ಯ ರಚನೆಗೆ ಸಾಮಾಜಿಕ ಜಾಲತಾಣವೂ ವರದಾನವಾಗಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.

ವಿವಿಧೆಡೆಗಳಿಂದ ಆಗಮಿಸಿದ್ದ ಕವಿಗಳು ಕವನ ವಾಚಿಸಿದರು. ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಹಳ್ಳಿ ವೆಂಕಟೇಶ್, ಲೇಖಕರಾದ ನಿಶಾ ಮುಳಗುಂದ, ದ್ಯಾವಪ್ಪ, ಪುರಸಭೆ ಸದಸ್ಯ ಎ.ಕೃಷ್ಣ ಅಣ್ಣಯ್ಯಪ್ಪ, ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net