

ಕೆಂಭಾವಿ: ಸಗರ ನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿಗಳನ್ನು ಸರ್ಕಾರ ಗುರುತಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ವಲಯ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಸಗರ ನಾಡು ಕಲೆ, ಸಂಗೀತ, ಸಾಹಿತ್ಯ, ಇತಿಹಾಸ ಮತ್ತು ಸಂಶೋಧನೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದು, ಇಲ್ಲಿರುವ ಅನೇಕ ಸಾಹಿತಿ ಮತ್ತು ಕವಿಗಳನ್ನು ಸರ್ಕಾರ ಗುರುತಿಸುವ ಕೆಲಸ ಮಾಡಬೇಕು. ಈ ಭಾಗದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಮಹನೀಯರಿದ್ದಾರೆ. ಅವರಲ್ಲಿ ಕನ್ನಡ ಸಾಹಿತ್ಯ ಭಂಡಾರವೆ ಅಡಗಿದೆ. ಹೀಗಾಗಿ ಅಂತವರನ್ನು ಗುರುತಿಸಬೇಕು ಎಂದು ಹೇಳಿದರು.
ಬಹಳ ದಿನದಿಂದ ನನೆಗುದಿಗೆ ಬಿದ್ದಿದ್ದ ವಲಯ ಸಾಹಿತ್ಯ ಪರಿಷತ್ ಘಟಕ ಪದಾಧಿಕಾರಿಗಳ ಆಯ್ಕೆಗೆ ಇದೀಗ ಕಾಲ ಕೂಡಿ ಬಂದಿದೆ. ಇದಕ್ಕೆ ಇಲ್ಲಿರುವ ಹಿರಿಯ ಸಾಹಿಗಳ ವಿಶೇಷ ಕಾಳಗಿ ಮತ್ತು ಆಸಕ್ತಿಯೇ ಇದಕ್ಕೆ ಕಾರಣ. ಮುಂಬರುವ ದಿನಗಳಲ್ಲಿ ಈ ಘಟಕ ಕನ್ನಡ ಸಾಹಿತ್ಯ, ಭಾಷೆ ಬೆಳೆಸುವಲ್ಲಿ ತನ್ನ ಚಟುವಟಿಕೆ ಮುಂದುವರಿಸಲಿ ಎಂದು ಹಾರೈಸಿದರು.
ವಲಯ ನೂತನ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ್ ಅವರಿಗೆ ಕನ್ನಡ ಧ್ವಜ ನೀಡುವ ಮೂಲಕ ನಿಕಟಪೂರ್ವ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕ ಮಾತನಾಡಿದರು. ನಂತರ ಪಟ್ಟಣದ ಐದು ಜನ ಹಿರಿಯ ಸಾಹಿತಿಗಳನ್ನು ಪರಿಷತ್‌ನಿಂದ ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ ಲಿಂಗನಗೌಡ ಮಾಲಿಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ತಾಲೂಕಾಧ್ಯಕ್ಷ ಶರಣಬಸವ ಯಾಳವಾರ, ವಲಯಾಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ, ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ, ಪುರಸಭೆ ಸದಸ್ಯ ರವಿ ಸೊನ್ನದ, ಶಾಂತಪ್ಪ ಬೂದಿಹಾಳ, ಆದಿತ್ಯ ಪೊಲೀಸ್ ಪಾಟೀಲ್, ಅರುಣೋದಯ ಸೊನ್ನದ, ಸುಮಿತ್ರಪ್ಪ ಅಂಗಡಿ, ಪಾರ್ವತಿ ಬೂದೂರ, ಮಹಿಪಾಲರೆಡ್ಡಿ ಡಿಗ್ಗಾವಿ, ವೀರೇಂದ್ರ ಧರಿ, ರಂಗಪ್ಪ ವಡ್ಡರ್, ನಂದಪ್ಪ ಕವಾಲ್ದಾರ, ಇಲಿಯಾಸ್ ವಡಕೇರಿ, ಮಲ್ಲನಗೌಡ ಪಾಟೀಲ್ ಇದ್ದರು. ವಿಜಯಾಚಾರ್ಯ ಪುರೋಹಿತ ಸ್ವಾಗತಿಸಿದರು, ಬಂದೇನವಾಜ ನಾಲತವಾಡ ವಂದಿಸಿದರು. ಜೆಟ್ಟೆಪ್ಪ ಪೂಜಾರಿ ನಿರೂಪಿಸಿದರು.