ಸಾಹಿತಿ ಸುಕನ್ಯಾ ಮುಕುಂದಗೆ ಆಹ್ವಾನ

2HSN3
Published on

ಹಾಸನ: ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಫೆ.9ರಂದು ಹಮ್ಮಿಕೊಂಡಿರುವ ಪ್ರಥಮ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಸಾಹಿತಿ ಸುಕನ್ಯಾ ಮುಕುಂದ ಅವರಿಗೆ ದಲಿತ ಮುಖಂಡ ನಾಗರಾಜ್ ಹೆತ್ತೂರು ಅಧಿಕೃತ ಆಹ್ವಾನ ನೀಡಿದರು.

ನಂತರ ಮಾತನಾಡಿ, ಸಾಹಿತ್ಯದ ಹೆಸರಿನಲ್ಲಿ ನಡೆಯುವ ಅಬ್ಬರದ ಸಮ್ಮೇಳನಗಳ ನಡುವೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸರಳ ಹಾಗೂ ಗುಣಾತ್ಮಕ ಕಾರ್ಯಕ್ರಮಕ್ಕೆ ಮುಂದಾಗಿರುವುದು ಶ್ಲಾಘನೀಯ. ಯುವ ಸಾಹಿತಿಗಳನ್ನು ಒಳಗೊಂಡಿರುವ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬರಹಗಾರರನ್ನು ಪ್ರೋತ್ಸಾಹಿಸುತ್ತಿದೆ. ಸುಕನ್ಯಾ ಮುಕುಂದ ಅವರ ಆಯ್ಕೆ ಖುಷಿ ತಂದಿದೆ ಎಂದರು.

ಅನನ್ಯ ಟ್ರಸ್ಟ್ ಅಧ್ಯಕ್ಷೆ ಕೆ.ಟಿ. ಜಯಶ್ರೀ ಮಾತನಾಡಿ, ಪ್ರತಿ ಕ್ಷೇತ್ರದಲ್ಲಿಯೂ ಮಹಿಳೆಯರನ್ನು ದ್ವಿತೀಯ ದರ್ಜೆ ಪ್ರಜೆಯಂತೆ ಕಾಣಲಾಗುತ್ತಿದೆ. ಎಲ್ಲರೂ ಸಮಾನರು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಸಾಹಿತ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಸಮ್ಮೇಳನಾಧ್ಯಕ್ಷರಿಗೆ ಹಾರ, ಶಾಲು ಹಾಕಿ ಗೌರವಿಸಿ ನಂತರ ಆಮಂತ್ರಿಸಲಾಯಿತು. ಲೇಖಕ ನಾಗರಾಜ್ ದೊಡ್ಡಮನಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಅಧ್ಯಕ್ಷೆ ಹೇಮರಾಗ, ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ, ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ರಾಜ್ಯ ಸಂಚಾಲಕ ಜಯಶಂಕರ್ ಬೆಳಗುಂಬ, ಜಿಲ್ಲಾ ಗೌರವಾಧ್ಯಕ್ಷ ಜಿ.ಓ. ಮಹಾಂತಪ್ಪ, ಗಂಜಲಗೂಡು ಗೋಪಾಲೇಗೌಡ, ಕಾರ್ಯದರ್ಶಿ ಸಿ.ಎನ್. ಉಷಾ, ಸಹ ಕಾರ್ಯದರ್ಶಿ ರಾಣಿ ಶಶಿಕಾಂತ್, ಕೊಟ್ರೇಶ್ ಎಸ್.ಉಪ್ಪಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net