ಸಾಹಿತಿ ಬಿ.ಎಲ್.ವೇಣು ಹೇಳಿಕೆ ಮತ್ತಿ ತಿಮ್ಮಣ್ಣ ನಾಯಕ ವೃತ್ತ ಉದ್ಘಾಟನೆ

CTD NEW-----
Published on

ಚಿತ್ರದುರ್ಗ: ಯುವಸಮೂಹಕ್ಕೆ ದುರ್ಗದ ಭವ್ಯ ಇತಿಹಾಸ ತಿಳಿಸುವ ಕಾರ್ಯ ಆಗಬೇಕಿದೆ ಎಂದು ಸಾಹಿತಿ ಬಿ.ಎಲ್. ವೇಣು ಸಲಹೆ ನೀಡಿದರು.

ಕೋಟೆ ರಸ್ತೆಯ ಶ್ರೀ ಏಕನಾಥೇಶ್ವರಿ ಪಾದಗುಡಿ ಸಮೀಪ ನಿರ್ಮಿಸಿರುವ ಹಗಲು ಕಗ್ಗೊಲೆ ಮಾನ್ಯ ರಾಜ ಮತ್ತಿತಿಮ್ಮಣ್ಣ ನಾಯಕ ವೃತ್ತವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಮೇಲುದುರ್ಗದ ಶ್ರೀ ಏಕನಾಥೇಶ್ವರಿ ದೇವಿ ದೇಗುಲ, ತಿಮ್ಮಣ್ಣ ನಾಯಕ ಕೆರೆ, ಮಾವಿನ ತೋಪು ಮತ್ತಿ ತಿಮ್ಮಣ್ಣ ನಾಯಕರ ಕಾಲದಲ್ಲಿ ನಿರ್ಮಾಣವಾಗಿವೆ. ಛಲ, ಬಲ ದುರ್ಗದ ಮೇಲಿನ ಆಪಾರ ಪ್ರೀತಿಯನ್ನು ಪಣವಾಗಿಟ್ಟು ಪಟ್ಟವನ್ನೇರಿ ಆಳ್ವಿಕೆ ನಡೆಸಿದ ಮೊದಲ ಪಾಳೆಗಾರ ಎಂದು ಬಣ್ಣಿಸಿದರು.

ಪರಾಕ್ರಮ, ಸಮರ ಚಾತುರ್ಯ, ದಿಟ್ಟ ನಿರ್ಧಾರ, ಪ್ರಜಾಪ್ರೇಮ, ನಾಡು-ನುಡಿ, ನೆಲ-ಜಲದ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡು ಸ್ವಾಭಿಮಾನದ ಅರಸರಾಗಿದ್ದರು. ಕಲಬುರಗಿಯನ್ನು ಮೂರು ಹಗಲಿನಲ್ಲೇ ಜಯಿಸಿ ಬಳುವಳಿಯಾಗಿ ನೀಡಿದ್ದರಿಂದ ವಿಜಯನಗರದ ಅರಸರು ತಿಮ್ಮಣ್ಣ ನಾಯಕರಿಗೆ ಹಗಲು ಕಗ್ಗೊಲೆ ಮಾನ್ಯ ಎಂಬ ಬಿರುದು ನೀಡಿ ಗೌರವಿಸಿದ್ದರು ಎಂದು ಸ್ಮರಿಸಿಕೊಂಡರು.

ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್ ಮಾತನಾಡಿ, ವೃತ್ತಕ್ಕೆ ರಾಜ ಮತ್ತಿತಿಮ್ಮಣ್ಣ ನಾಯಕರ ಹೆಸರನ್ನು ಇಟ್ಟಿರುವುದು ನಮ್ಮೆಲ್ಲರ ಸೌಭಾಗ್ಯ. ಈ ವೃತ್ತದ ಮೇಲೆ ದುರ್ಗವನ್ನಾಳಿದ ಎಲ್ಲ ಪಾಳೆಗಾರರ ಭಾವಚಿತ್ರ ಹಾಕುವ ಮೂಲಕ ಪ್ರವಾಸಿಗರಿಗೆ ನಮ್ಮ ಕೋಟೆನಾಡಿನ ಇತಿಹಾಸ ತಿಳಿಸುವ ಕಾರ್ಯ ನಗರಸಭೆಯಿಂದಲೇ ಆಗಬೇಕು ಎಂದು ಒತ್ತಾಯಿಸಿದರು.

ಇತಿಹಾಸ ಸಂಶೋದಕ ಮಹಾಂತೇಶ್ ಮಾತನಾಡಿ, ದುರ್ಗದ ರಾಜರನ್ನು ಸದಾ ಸ್ಮರಿಸಬೇಕಿದೆ. ಅವರ ಸಮಾಧಿಗಳನ್ನು ಸಂರಕ್ಷಿಸಬೇಕಿದೆ. ಅವರೆಲ್ಲರ ಹೆಸರುಗಳನ್ನೂ ವೃತ್ತಗಳಿಗೆ ಇಡುವುದಷ್ಟೇ ಅಲ್ಲ, ಪ್ರತಿಮೆಗಳು ನಿರ್ಮಾಣವಾಗಬೇಕು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್, ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್, ಮದಕರಿ ಸಂಘದ ಅಧ್ಯಕ್ಷ ಡಿ. ಗೋಪಾಲಸ್ವಾಮಿ ನಾಯಕ, ನಗರಸಭೆ ಸದಸ್ಯರಾದ ದೀಪು, ಚಂದ್ರಶೇಖರ್, ಮಾಜಿ ಸದಸ್ಯರಾದ ಎಸ್.ಬಿ. ಮಲ್ಲಿಕಾರ್ಜುನ್, ಸಿ.ಟಿ. ರಾಜೇಶ್, ಲೇಖಕ ಆನಂದಕುಮಾರ್, ಕುಮಾರ್, ಶಿವಶಕ್ತಿ ಪ್ರಸನ್ನಕುಮಾರ್, ಅಜೇಯ ಮದಕರಿ, ಸೋಮಶೇಖರ್, ರಾಜ ಮದಕರಿನಾಯಕ, ನಿವೃತ್ತ ಸರ್ಕಾರಿ ನೌಕರರ ನಾಯಕರ ಸಂಘದ ಬೋರಯ್ಯ, ಕರವೇ ಅಧ್ಯಕ್ಷ ರಮೇಶ್, ಸೋಮೇಂದ್ರ, ಪಾಪೇಶ್‌ನಾಯಕ, ಸಾಹಿತಿ ಕುಮಾರ ಬಡ್ಡಪ್ಪ, ನವೀನ್ ಮಸ್ಕಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net