

ಮೈಸೂರು: ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ, ಸಾಹಿತಿ, ವಿದ್ವಾಂಸ ಪ್ರೊ.ಮಲೆಯೂರು ಗುರುಸ್ವಾಮಿ (76) ಬುಧವಾರ ರಾತ್ರಿ ನಿಧನರಾದರು. ಅನಾರೋಗ್ಯದಿಂದ ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಮಧ್ಯರಾತ್ರಿ ಸುಮಾರು 12.30ರಲ್ಲಿ ಕೊನೆಯುಸಿರೆಳೆದರು. ಪತ್ನಿ, ಒಬ್ಬ ಪುತ್ರಿ ಇದ್ದಾರೆ.
ಹಿನಕಲ್‌ನಲ್ಲಿರುವ ಅವರ ಮನೆಯಲ್ಲಿ ಗುರುವಾರ ಬೆಳಗ್ಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಹುಟ್ಟೂರಾದ ಚಾಮರಾಜನಗರ ತಾಲೂಕಿನ ಮಲೆಯೂರಿನಲ್ಲಿ ಅಂತ್ಯಕ್ರಿಯೆ ನಡೆಯಿತು.
ಮೈಸೂರಿನ ಜೆಎಸ್‌ಎಸ್ ಸಂಸ್ಥೆಯಲ್ಲಿ 3 ದಶಕಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಬಸವ ಪೀಠದ ಸ್ಥಾಪಕ ಪ್ರಾಧ್ಯಾಪಕರಾಗಿ ಒಂದು ವರ್ಷ ಕಾರ್ಯನಿರ್ವಹಿಸಿದ್ದರು. ಸಾಹಿತ್ಯ ಕೃಷಿಯಲ್ಲೂ ಗಮನ ಸೆಳೆದಿದ್ದರು. ಮಲೆ ಮಹದೇಶ್ವರರ ಕುರಿತು ಮಹಾಯಾತ್ರಿಕ, ಮೈಸೂರಿನ ರಾಜರಾಗಿದ್ದ ಚಿಕ್ಕದೇವರಾಜ ಒಡೆಯರ್ ಕಾಲದ ಹಿನ್ನೆಲೆಯಲ್ಲಿ ಬರೆದ ಚಾರಿತ್ರಿಕವಾದ ಅಪ್ರತಿಮ ವೀರ ಮತ್ತು ರಾಜಪ್ರಭುತ್ವದ ಕಾಲದಲ್ಲಿ ಇದ್ದಂತಹ ಸಾಮಾಜಿಕವಾದ ಚಿತ್ರವಿಚಿತ್ರ ಸಂಗತಿ ಬಿಚ್ಚಿಡುವ ‘ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ’ ಕಾದಂಬರಿಗಳು ಪ್ರಮುಖ ಕೃತಿಗಳಾಗಿವೆ.
ಅಲ್ಲದೆ, ಗಾಯಕಿ, ನರ್ತಕಿಯಾಗಿದ್ದ ನಾಗರತ್ನಮ್ಮ ಅವರ ಜೀವನಾಧಾರಿತ ‘ಕಪಿಲೆ ಹರಿದಳು ಕಡಲಿಗೆ’, ಬಹು ಚರ್ಚಿತ ನಾಟಕಕಾರ ಸಂಸ ಅವರ ಜೀವನ ಮತ್ತು ನಾಟಕಗಳನ್ನು ಆಧರಿಸಿದ ‘ಸಂಸ’ ಮತ್ತು ‘ಬಂಗಾರದೊಡ್ಡಿ’ ಕಾದಂಬರಿಗಳನ್ನು ಬರೆದಿದ್ದರು.
ಇದರೊಂದಿಗೆ ಸಾಹಿತ್ಯ ಸುವರ್ಣಾವತಿ, ಪ್ರಭುಲಿಂಗಲೀಲೆ, ಬಸವಣ್ಣ, ಕಪಿಲಾ ನದಿಯ ಎಡಬಲದಿ, ಹೊನ್ನಹೊಳೆ, ಮಾತಿನೊಳಗಣ ಮೌನ, ಶರಣಕಿರಣ, ಮಾತೆಂಬುದು ಜ್ಯೋತಿರ್ಲಿಂಗ ಇವರ ಇತರ ಕೃತಿಗಳು. ಅನೇಕ ಸಂಪಾದಿತ ಕೃತಿಗಳನ್ನು ಬರೆದಿದ್ದರು. ಸಾಹಿತ್ಯ ಕೃಷಿಯೊಂದಿಗೆ ಸಮಾಜಮುಖಿಯಾಗಿದ್ದ ಇವರು, ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ 9 ವರ್ಷ, ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ 5 ವರ್ಷ ಕಾರ್ಯನಿರ್ವಹಿಸಿದ್ದರು. ಇವರ ಸೇವೆ ಗುರುತಿಸಿ 2010ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ, ಪುರಸ್ಕಾರ ಒಲಿದಿದ್ದವು.