

ಮೈಸೂರು: ತಾಲೂಕಿನ ಉದ್ಬೂರು ಬಳಿ ಇರುವ ವಿಷ್ಣು ಸ್ಮಾರಕದಲ್ಲಿ ಹಿರಿಯ ನಟ ದಿವಂಗತ ಡಾ.ವಿಷ್ಣುವರ್ಧನ ಅವರ 75ನೇ ಜನ್ಮ ದಿನವನ್ನು ಗುರುವಾರ ಸಡಗರದಿಂದ ಆಚರಿಸಲಾಯಿತು.
ವಿಷ್ಣುವರ್ಧನ್ ಪತ್ನಿ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ ವಿಷ್ಣುವರ್ಧನ್, ಅಳಿಯ ನಟ ಅನಿರುದ್ಧ್, ಮೊಮ್ಮಗ ಜೇಷ್ಠವರ್ಧನ್ ಪಾಲ್ಗೊಂಡಿದ್ದು ಅಭಿಮಾನಗಳ ಸಂಭ್ರಮ ಇಮ್ಮಡಿಗೊಳ್ಳಲು ಕಾರಣವಾಯಿತು. ಕುಟುಂಬದವರು ವಿಷ್ಣುವರ್ಧನ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆಯಿಂದ ತಂಡೋಪತಂಡವಾಗಿ ನೂರಾರು ಅಭಿಮಾನಿಗಳು ಸ್ಮಾರಕಕ್ಕೆ ದೌಡಾಯಿಸಿದ್ದರು. ನೆಚ್ಚಿನ ನಟನ ರೀತಿಯಲ್ಲೇ ವೇಷಭೂಷಣ ತೊಟ್ಟು, ಜಯಘೋಷ ಕೂಗಿ ಸಂಭ್ರಮಿಸಿದರು. ಆಟೋರಿಕ್ಷಾಗಳಿಗೆ ಕನ್ನಡದ ಬಾವುಟ ಕಟ್ಟಿ, ವಿಷ್ಣುವರ್ಧನ್ ಭಾವಚಿತ್ರವುಳ್ಳ ಸ್ಟಿಕ್ಕರ್‌ಗಳಿಂದ ಸಿಂಗರಿಸಲಾಗಿತ್ತು.
ವಿಷ್ಣುವರ್ಧನ್ ಅಭಿಮಾನಿಗಳ ಸಂಘಗಳ ಒಕ್ಕೂಟದ ವತಿಯಿಂದ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ದಿನವಿಡೀ ವಿಷ್ಣುವರ್ಧನ್ ಅಭಿನಯದ ಚಿತ್ರಗೀತೆಗಳ ಗಾಯನ ನಡೆಯಿತು. ಅಭಿಮಾನಿಗಳು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ನಿವಾಸಿ ಕಲಾವಿದ ವಿಜಯ್ ಅವರು ಅಭಿಮಾನಿಗಳ ಕೆನ್ನೆ ಹಾಗೂ ಕೈ ಮೇಲೆ ‘ಕರ್ನಾಟಕ ರತ್ನ ವಿಷ್ಣು’ ಮತ್ತು ಅವರ ನಟಿಸಿದ ಚಿತ್ರಗಳ ಹೆಸರಿನ ಟ್ಯಾಟೂಗಳನ್ನು ಉಚಿತವಾಗಿ ಬರೆಯುವ ಮೂಲಕ ಅಭಿಮಾನ ಮೆರೆದರು.
ನಟ, ಅಳಿಯ ಅನಿರುದ್ಧ ಮಾತನಾಡಿ, ಅಪ್ಪಾಜಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಬಂದಿರುವುದು ಅಭಿಮಾನಿಗಳ ಆಶೀರ್ವಾದದಿಂದ. ಪ್ರತಿವರ್ಷ ಅವರ ಜನ್ಮದಿನವನ್ನು ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ರಕ್ತಕ್ಕೆ ಜಾತಿ, ಧರ್ಮದ ಭೇದವಿಲ್ಲ. ಅಪಘಾತ, ತುರ್ತು ಅವಘಡದಲ್ಲಿ ಸಿಲುಕಿದವರಿಗೆ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ದಾನಿಗಳ ಮೂಲಕವೇ ಅವಶ್ಯವಿದ್ದವರಿಗೆ ಪೂರೈಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅರ್ಹ ದಾನಿಗಳು ರಕ್ತದಾನ ಮಾಡುವುದರ ಮೂಲಕ ಇತರರ ಜೀವ ಉಳಿಸಲು ಸಹಕರಿಸಬೇಕು ಎಂದರು.
ಜೀವ ರಕ್ಷಣೆ ಕಾರಣವಾಗುವ ಮಹತ್ವದ ಕಾರ್ಯದಲ್ಲಿ ಭಾಗಿಯಾಗುವ ಕೆಲಸವನ್ನು ಯುವಜನತೆ ಮಾಡಬೇಕು. ಪ್ರಸ್ತುತ ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದರು.