ಸಾಹಸಮಯ ಜೀವನಕ್ಕೆ ಒನಕೆ ಓಬವ್ವ ಆದರ್ಶ

1
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ

ಆತ್ಮಸ್ಥೈರ್ಯ, ಸಮಯಪ್ರಜ್ಞೆ, ಶೌರ್ಯ ಮತ್ತು ಸಾಹಸ ಜೀವನಕ್ಕೆ ವೀರವನಿತೆ ಒನಕೆ ಓಬವ್ವ ಆದರ್ಶವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಓಬವ್ವ ಅವರ ಆದರ್ಶಗಳನ್ನು ಪಾಲಿಸುವ ಮೂಲಕ ನಾಡಿನ ರಕ್ಷಣೆಗೆ ಪಣತೊಡಬೇಕು ಎಂದರು.

ಎದುರಾಳಿ ಸೈನಿಕರು ಕೋಟೆಗೆ ಮುತ್ತಿಗೆ ಹಾಕಿದಾಗ ಮನೆಯಲ್ಲಿದ್ದ ಒನಕೆಯನ್ನು ಆಯುಧವನ್ನಾಗಿಸಿ, ಎದುರಾಳಿ ಸೈನಿಕರನ್ನು ಹೊಡೆದುರುಳಿಸಿ ಕೋಟೆಯನ್ನು ರಕ್ಷಿಸಿದರು ಎಂದರು.

ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ ಮಾತನಾಡಿ, ಓಬವ್ವ ಅವರ ಧೈರ್ಯ ಹಾಗೂ ಸಾಹಸದಿಂದ ಹತ್ತಾರು ಸೈನಿಕರನ್ನು ಹೊಡೆದುರುಳಿಸಿ ಕೋಟೆಯನ್ನು ರಕ್ಷಿಸಿದ್ದಕ್ಕಾಗಿ ವೀರವನಿತೆ ಓಬವ್ವ ಎಂದು ಕರೆಯುತ್ತಾರೆ, ಮಹಿಳೆಯರ ಧೈರ್ಯಕ್ಕೆ ಸ್ಪೂರ್ತಿ ಓಬವ್ವ ಎಂದರು. ಓಬವ್ವ ಹಾಗೂ ಆಕೆಯ ಪತಿ ಕಹಳೆ ಮುದ್ದಹನುಮನ ಹೋರಾಟ ಹಾಗೂ ಶತ್ರುಗಳನ್ನು ಸದೆಬಡಿದ ಇತಿಹಾಸದ ಬಗ್ಗೆ ಕಾರಹಳ್ಳಿ ಶ್ರೀನಿವಾಸ್ ಉಪನ್ಯಾಸ ನೀಡಿದರು. ಜಿಲ್ಲೆಯ ವಿವಿಧ ಕ್ಷೇತ್ರದ ಸಾಧಕ ಮಹಿಳೆಯರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ರಾಜಣ್ಣ, ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್.ಅನುರಾಧ, ತಹಸೀಲ್ದಾರ್ ಎಚ್.ಬಾಲಕೃಷ್ಣ, ತಾಲೂಕು ಪಂಚಾಯಿತಿ ಇಒ ಶ್ರೀನಾಥಗೌಡ, ಜಿಲ್ಲಾ ಎಸ್‌ಸಿ ಕಾಂಗ್ರೆಸ್ ಅಧ್ಯಕ್ಷ ಚೌಡಪನಹಳ್ಳಿ ಎಂ.ಲೋಕೇಶ್, ಶೆಟ್ಟಿಗೆರೆ ರಾಜಣ್ಣ, ಬಿದಲೂರು ಗ್ರಾಪಂ ಮಾಜಿ ಅಧ್ಯಕ್ಷರಾದ ಎಸ್.ಪಿ. ಮುನಿರಾಜು, ನಾಗೇಗೌಡ, ಗ್ರಾಪಂ ಸದಸ್ಯರಾದ ಪ್ರಕಾಶ್, ನರಸಪ್ಪ, ಡಿಎಸ್‌ಎಸ್ ನ ಆವತಿ ತಿಮ್ಮರಾಯಪ್ಪ , ರವಿಕಲಾ ಇದ್ದರು.

ಅಣ್ಣೇಶ್ವರ ಗ್ರಾಪಂನಿಂದ ಹೂವಿನ ಪಲ್ಲಕಿ ರಥ: ವೀರವನಿತೆ ಒನಕೆ ಓಬವ್ವ ಜಯಂತಿ ಪ್ರಯುಕ್ತ ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಪಂ ವತಿಯಿಂದ ಅದ್ದೂರಿ ಹೂವಿನ ಪಲ್ಲಕಿ ರಥ ನಿರ್ಮಿಸಿ ದೇವನಹಳ್ಳಿಯಲ್ಲಿ ಮಎರವಣಿಗೆ ಮಾಡಲಾಯಿತು. ಸಮುದಾಯದ ಮುಖಂಡರು ರಥಕ್ಕೆ ಸ್ವಾಗತಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಪುರಸಭಾ ಸದಸ್ಯ, ಸುರೇಶ್, ಕಾಳಪ್ಪನವರ ವೆಂಕಟೇಶ್, ಗ್ರಾಪಂ ಸದಸ್ಯ ಅತ್ತಿಬೆಲೆ ನರಸಪ್ಪ, ಲೇತ್ ನಾರಾಯಣಸ್ವಾಮಿ, ಸುಮಿತ್ರಮ್ಮ, ನಾಗರಾಜ್, ರಾಜು, ಹನುಮಂತಪ್ಪ, ನಾರಾಯಣಸ್ವಾಮಿ, ನಾಗರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net