ಸಾಸಿವೆ, ನವಣೆ ಎಸೆದು ಮಾಟಮಂತ್ರ!

25-Saunahi-2,
Published on

ಸಂಶಿ: ಜಿದ್ದಾಜಿದ್ದಿ ರಾಜಕೀಯಕ್ಕೆ ಹೆಸರಾದ ಸಂಶಿ ಗ್ರಾಮದಲ್ಲಿ ಗ್ರಾ.ಪಂ. ಚುನಾವಣೆ ಕಣ ರಂಗೇರಿದ ಬೆನ್ನಲ್ಲೇ ಇಲ್ಲಿನ 5 ಮತ್ತು 6 ನೇ ವಾರ್ಡ್​ಗಳಲ್ಲಿ ಮತದಾರರ ಮನೆಗಳ ಮುಂದೆ ನವಣೆ, ಸಾಸಿವೆ ಕಾಳುಗಳು ಪತ್ತೆಯಾಗಿದ್ದು, ವಾಮಾಚಾರದ ಶಂಕೆ ವ್ಯಕ್ತವಾಗಿದೆ.

ಸ್ಥಳೀಯರ ಮಾಹಿತಿ ಪ್ರಕಾರ ಡಿ.24 ಗುರುವಾರ ಮಧ್ಯರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಾಳುಗಳನ್ನು ಚೆಲ್ಲಿ ಹೋಗಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಆತಂಕಕ್ಕೀಡಾದ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಗ್ರಾಮ ಪಂಚಾಯಿತಿ ಕಚೇರಿ, ಹನುಮಂತದೇವರ ದೇವಸ್ಥಾನ, ಪ್ರೆಟ್ರೋಲ್ ಬಂಕ್, ನೆಮ್ಮದಿ ಕೇಂದ್ರಗಳಲ್ಲಿನ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ವಾಹನದ ಸಂಖ್ಯೆ, ಯಾವ ವ್ಯಕ್ತಿಗಳು ಎಂಬುದರ ಸ್ಪಷ್ಟತೆ ದೊರೆತಿಲ್ಲ.

ಸಭೆ ಸೇರಿದ ಅಭ್ಯರ್ಥಿಗಳು: ವಾಮಾಚಾರದ ಶಂಕೆಗೆ ಸಂಬಂಧಿಸಿದಂತೆ ಎರಡು ವಾರ್ಡ್​ಗಳಿಗೆ ಸ್ಪರ್ಧಿಸಿರುವ ಎಲ್ಲ 21 ಅಭ್ಯರ್ಥಿಗಳು ಒಂದೆಡೆ ಸಭೆ ಸೇರಿ ಚರ್ಚೆ ನಡೆಸಿದರು. ಎಲ್ಲರೂ ಸೇರಿ ಹನುಮಂತ ದೇವರ ಮೇಲೆ ಪ್ರಮಾಣ ಮಾಡಬೇಕೆಂಬ ನಿರ್ಧಾರಕ್ಕೆ ಬಂದರು. ಅದರಂತೆ, ‘ಈ ವಾಮಾಚಾರವನ್ನು ನಾನು ಮಾಡಿಲ್ಲ, ಅದಕ್ಕೆ ಕುಮ್ಮಕ್ಕೂ ನೀಡಿಲ್ಲ. ತಪ್ಪಿದ್ದಲ್ಲಿ ದೇವರೇ ಶಿಕ್ಷೆ ನೀಡಲಿ’ ಎಂದು ಎಲ್ಲ ಅಭ್ಯರ್ಥಿಗಳು ಪ್ರಮಾಣ ಮಾಡಿದರು.

ಚುನಾವಣೆ ರದ್ದುಗೊಳಿಸಲು ಪಟ್ಟು: ‘ಎರಡು ದಿನ ರಾಜಕೀಯ ಮಾಡಿ ನೀವು ಸುಮ್ಮನಾಗುತ್ತಿರಿ. ವಾಮಾಚಾರದ ಪರಿಣಾಮವಾಗಿ ನಮ್ಮ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆಗಾರರು’ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಾರ್ವಜನಿಕರು ಎರಡು ವಾರ್ಡ್​ಗಳ ಚುನಾವಣೆ ರದ್ದುಗೊಳಿಸುವಂತೆ ಪಟ್ಟು ಹಿಡಿದರು. ಅಭ್ಯರ್ಥಿಗಳೊಂದಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಬಂದ ಸಾರ್ವಜನಿಕರು ಘಟನೆ ಕುರಿತಾಗಿ ಚುನಾವಣೆ ಅಧಿಕಾರಿಗಳಿಗೆ ನಡೆದ ಘಟನೆ ವಿವರಿಸಿ ಚುನಾವಣೆ ನಿಲ್ಲಿಸುವಂತೆ ಮನವಿ ಸಲ್ಲಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಚುನಾವಣೆ ಅಧಿಕಾರಿ ರಘು ಎಂ.ಎಸ್., ‘ಪ್ರಕೃತಿ ವಿಕೋಪ ಸಂಭವಿಸಿದಾಗ ಮಾತ್ರ ಚುನಾವಣೆ ನಿಲ್ಲಿಸಲು ಅವಕಾಶವಿರುತ್ತದೆ. ವಾಮಾಚಾರದಂತಹ ಘಟನೆಗೆಲ್ಲ ಚುನಾವಣೆ ನಿಲ್ಲಿಸಲು ಬರುವುದಿಲ್ಲ. ಈ ಕುರಿತಾಗಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net