

ಉಪತಹಶೀಲ್ದಾರ್ ವೀಣಾ ನೇತೃತ್ವದಲ್ಲಿ ಎಣಿಕೆ
ಕಿಕ್ಕೇರಿ: ಬಯಲು ಸೀಮೆ ಸುಬ್ರಹ್ಮಣ್ಯ ಎಂದೇ ಖ್ಯಾತವಾಗಿರುವ ಸಾಸಲು ಗ್ರಾಮದ ಶ್ರೀ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಹುಂಡಿಯಲ್ಲಿ 12,16,391ರೂ. ಕಾಣಿಕೆ ಸಂಗ್ರಹವಾಗಿದೆ.
ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖ ಶನಿವಾರ ಎಣಿಕೆ ಕಾರ್ಯ ನಡೆಯಿತು. ಕಾರ್ತಿಕ ಮಾಸದ ಕೊನೆಯ ಸೋಮವಾರದ 7ದಿನಗಳಲ್ಲಿ ಈ ಮೊತ್ತದ ಹಣ ಸಂಗ್ರಹವಾಗಿದೆ. ತಹಶೀಲ್ದಾರ್ ಅಶೋಕ್ ಅವರ ಮಾರ್ಗದರ್ಶನದಲ್ಲಿ ಉಪತಹಶೀಲ್ದಾರ್ ವೀಣಾ ನೇತೃತ್ವದಲ್ಲಿ ದೇಗುಲ ಆವರಣದಲ್ಲಿ ಎಣಿಕೆ ಕಾರ್ಯ ನೆರವೇರಿತು. ಕಾಣಿಕೆಯೊಂದಿಗೆ ಬೆಳ್ಳಿಯ ನಾಗರಸೆಡೆ, ತೊಟ್ಟಿಲು, ಕಣ್ಣು ಮತ್ತಿತರ ಆಕೃತಿಯ ವಸ್ತುಗಳನ್ನು ಭಕ್ತರು ಹುಡಿಯಲ್ಲಿ ಸಮರ್ಪಿಸಿದ್ದಾರೆ. ಶ್ರೀ ಸೋಮೇಶ್ವರ ಹಾಗೂ ಶಂಭುಲಿಂಗೇಶ್ವರ ಬಾಲಾಲಯ ದೇಗುಲದಲ್ಲಿರುವ ಒಟ್ಟು 22ಹುಂಡಿಗಳನ್ನು ಬೆಳಗಿನಿಂದ ಸಂಜೆಯವರೆಗೆ ಕಿಕ್ಕೇರಿ ಪೊಲೀಸರ ಸರ್ಪಗಾವಲಿನಲ್ಲಿ ಎಣಿಕೆ ಮಾಡಲಾಯಿತು. ನಂತರ ಬ್ಯಾಂಕ್ ಆಫ್ ಬರೋಡಾ ಖಾತೆಗೆ ಜಮಾ ಮಾಡಲಾಯಿತು. ರಾಜಸ್ವ ನಿರೀಕ್ಷಕ ಡಿ. ಆರ್.ನರೇಂದ್ರ, ಗ್ರಾಮ ಆಡಳಿತಾಧಿಕಾರಿಗಳಾದ ಬಿ.ಎಂ. ಪ್ರಸನ್ನ, ಸೋಮಾಚಾರ್, ತಿಪ್ಪೇಶ್, ಸುನೀಲ್‌ಗಾಣಿಗೇರ್, ಹರ್ಷಿತಾ, ವನಜಾಕ್ಷಿ, ಮುಜರಾಯಿ ಸಹಾಯಕಿ ಪೂರ್ಣಿಮಾ, ಬ್ಯಾಂಕ್ ಸಿಬ್ಬಂದಿ ಇದ್ದರು.