ಸಾಸಲು ಧಾರ್ಮಿಕ ಕ್ಷೇತ್ರದಲ್ಲಿ ಕಾರ್ತಿಕ ಉತ್ಸವ

19-kk1(11-24 sasalu 3 karthika jana jatre
Published on

ಎತ್ತ ನೋಡಿದರೂ ಭಕ್ತರ ದಂಡು

 ಕಿಕ್ಕೇರಿ : ಬಯಲು ಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಎಂಬ ಪ್ರಸಿದ್ಧಿ ಪಡೆದಿರುವ ಹೋಬಳಿಯ ಸಾಸಲು ಕ್ಷೇತ್ರದಲ್ಲಿ ಭಕ್ತರ ಜಾತ್ರೆಯೇ ನೆರೆದಿತ್ತು. ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ನೆರೆಯ ಹಳ್ಳಿಗಳ, ವಿವಿಧ ತಾಲೂಕು ಮತ್ತು ಹೊರ ರಾಜ್ಯದಿಂದ ಆಗಮಿಸಿದ್ದ ಒಂದು ಲಕ್ಷಕ್ಕೂ ಹೆಚ್ಚಿನ ಭಕ್ತರು ಸಮಾವೇಶಗೊಂಡು ಪುರಾಣ ಪ್ರಸಿದ್ಧ ಶ್ರೀ ಸೋಮೇಶ್ವರ ಮತ್ತು ಶ್ರೀ ಶಂಭುಲಿಂಗೇಶ್ವರ ದೇವರಿಗೆ ಭಕ್ತಿ ಸಮರ್ಪಣೆ ಮಾಡಿದ್ದು ಗಮನ ಸೆಳೆಯಿತು.

ಸೋಮವಾರ ಬೆಳಗಿನ ಜಾವದಿಂದಲೇ ಸಮೀಪದ ಗ್ರಾಮದ ಜನರು ಎತ್ತಿನ ಗಾಡಿಯಲ್ಲಿ ಬಂದರೆ, ದೂರದ ಊರಿನವರು ವಿವಿಧ ವಾಹನಗಳಲ್ಲಿ ಆಗಮಿಸಿ ಕ್ಷೇತ್ರದ ಪವಿತ್ರ ಕೊಳದಲ್ಲಿ ಕಾರ್ತಿಕ ಸ್ನಾನ ಮಾಡಿದರು. ಮುಜರಾಯಿ ಇಲಾಖೆ ಕ್ಷೇತ್ರದ ಶ್ರೀ ಸೋಮೇಶ್ವರ, ಶ್ರೀ ಶಂಭುಲಿಂಗೇಶ್ವರ ದೇಗುಲವನ್ನು ನವೀಕರಣ ಮಾಡುತ್ತಿರುವ ಕಾರಣ ದೇವರ ಉತ್ಸವ ಮೂರ್ತಿಗಳನ್ನು ದ್ವಾರ ಬಾಗಿಲಿನಲ್ಲೇ ಬಾಲಾಲಯ ನಿರ್ಮಿಸಿ ಇರಿಸಿದ್ದು, ದರ್ಶನ ಪಡೆಯಲು ಭಕ್ತರು ಪರದಾಡಿದರು. ಸಾಲು, ಸಾಲು ಭಕ್ತರ ದಂಡೇ ಇಲ್ಲಿ ನೆರೆದಿತ್ತು.

ವಿವಿಧ ಅಭಿಷೇಕ, ಪೂಜೆ: ಅರ್ಚಕರು ಮುಂಜಾನೆಯಿಂದಲೇ ಬಾಲಾಲಯ ಶುಚಿಗೊಳಿಸಿ, ಶ್ರೀ ಸೋಮೇಶ್ವರ, ಶ್ರೀ ಶಂಭುಲಿಂಗೇಶ್ವರ, ಸಹೋದರಿ ಶ್ರೀ ಕುದುರೆ ಮಂಡಮ್ಮ ಮೂರ್ತಿಗೆ ವಿವಿಧ ಆಭಿಷೇಕ, ಬಿಲ್ವಾರ್ಚನೆ, ಗಂಧ ಅಭಿಷೇಕ, ಚಂದನಾಭಿಷೇಕ ಮಾಡಿದರು. ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಿ ನೈವೇದ್ಯ ಸಮರ್ಪಿಸಿ ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ನಾಗಬನದಲ್ಲೂ ಪೂಜೆ: ಕ್ಷೇತ್ರದ ಪುಷ್ಕರಿಣಿಯಲ್ಲಿ ಮಂಗಳ ಸ್ನಾನ ಮಾಡಿ ಹೊರಬಂದ ಭಕ್ತರು ನಾಗಬನದಲ್ಲಿರುವ ನಾಗರಕಲ್ಲು, ಹುತ್ತಗಳಿಗೆ ಪೂಜೆ ಸಮರ್ಪಿಸಿದರು. ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದ ಜನರು ನಾಗದೇವನಿಗೆ ಭಕ್ತಿ ಸಮರ್ಪಣೆ ಮಾಡಿದರು.

ಇಷ್ಟಾರ್ಥ ಸಿದ್ದಿಯಾದವರು ಹರಕೆ ಪ್ರತೀಕವಾಗಿ ತಲೆ ಮುಡಿ, ನಾಗರ ಪೂಜೆ, ಹಣ್ಣು ಕಾಯಿ ಸಮರ್ಪಣೆ, ಹುಂಡಿಗೆ ಕಾಣಿಕೆ ಅರ್ಪಿಸಿ ಧನ್ಯತೆ ಮೆರೆದರು.

ಕಾಡಿದ ಸಮಸ್ಯೆ: ಪುಷ್ಕರಿಣಿಯಲ್ಲಿ ಪುಣ್ಯಸ್ನಾನ ಮಾಡಿದ ಮಹಿಳೆಯರು ಬಟ್ಟೆ ಬದಲಾಯಿಸಿಕೊಳ್ಳಲು ಪ್ರತ್ಯೇಕ ಕೊಠಡಿಯಿಲ್ಲದ ಕಾರಣ ಪರದಾಡಿದ್ದು ಗಮನ ಸೆಳೆಯಿತು. ಮುಜರಾಯಿ ಇಲಾಖೆ ಇತ್ತ ಗಮನ ಹರಿಸದಿರುವುದು ತೊಂದರೆಗೆ ಕಾರಣವಾಯಿತು. ಸಾಸಲು ಗ್ರಾಮಕ್ಕೆ ವಾಹನಗಳಲ್ಲಿ ಆಗಮಿಸಿದ ಭಕ್ತರೂ ಪರದಾಡಿದರು. ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ದೇಗುಲದಿಂದ 4 ಕಿ.ಮೀ. ವರೆಗೂ ಟ್ರಾಫಿಕ್ ಜಾಮ್ ಆಗಿತ್ತು.

ಭರ್ಜರಿ ವ್ಯಾಪಾರ: ಜಾತ್ರೆಯಲ್ಲಿ ಜಮಾಯಿಸಿದ್ದ ಮಿಠಾಯಿ, ಮಕ್ಕಳ ಅಟಿಕೆ ಅಂಗಡಿ, ಕಡಲೆ ಪುರಿ ಮಳಿಗೆಗಳಿಗೆ ಸೋಮವಾರ ಭರ್ಜರಿ ವ್ಯಾಪಾರವಾಯಿತು. ಭಕ್ತರ ದಟ್ಟಣೆ ಹೆಚ್ಚಾಗಿದ್ದ ಕಾರಣ ಆಟೋ ರಿಕ್ಷಾ ಚಾಲಕರಿಗೂ ಸಾಕಷ್ಟು ಆದಾಯ ದೊರಕಿತು. ಕಿಕ್ಕೇರಿ ಪೊಲೀಸ್ ಇನ್ಸ್‌ಪೆಕ್ಟರ್ ರೇವತಿ ಬಿಗಿ ಬಂದುಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ದೇವಾಲಯದ ಅನ್ನದಾಸೋಹ ಸಮಿತಿಯಿಂದ ಭಕ್ತರಿಗೆ ಮಹಾಪ್ರಸಾದ ವಿತರಣೆ ನೆರವೇರಿತು. ಐನೋರಹಳ್ಳಿ ಗ್ರಾಮಸ್ಥರು ಮಕ್ಕಳಿಗೆ ಹಾಲು ವಿತರಣೆ ಮಾಡಿ ಗಮನಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net