ಸಾಸಲು ಗ್ರಾಮದಲ್ಲಿ ಸಗಣಿ ಹಬ್ಬದ ಸಂಭ್ರಮ

06kkr3(10-24 sagani abba
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ಈಚೆಗೆ ನಡೆದ ಸಗಣಿ ಓಕುಳಿ ಹಬ್ಬದಲ್ಲಿ ಸೆಣಸಾಡುತ್ತಿರುವ ಯುವಕರ ದಂಡು.
Published on

 ಕಿಕ್ಕೇರಿ: ಹೋಬಳಿಯ ಶರಣರ ಗ್ರಾಮವಾದ ಸಾಸಲು ಗ್ರಾಮದಲ್ಲಿ ಸಗಣಿ ಓಕುಳಿ ಹಬ್ಬ ಸಂಭ್ರಮ ಸಡಗರದಿಂದ  ನಡೆಯಿತು.

ಜಂಗಮ ಹಾಗೂ ಶಿವನಿಗೆ ಭಕ್ತಿಯ ವಿಷಯದಲ್ಲಿ ನಡೆದ ಹೋರಾಟದಲ್ಲಿ ನಡೆದ ಯುದ್ಧದಲ್ಲಿ ಶಿವನಿಗೆ ಸೋಲಾಗಿ ಜಂಗಮನಿಗೆ ಗೆಲುವಾದ ಹಿನ್ನೆಲೆಯಲ್ಲಿ ಧಾರ್ಮಿಕ ಹಬ್ಬವನ್ನು ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ.

ಗ್ರಾಮದಲ್ಲಿನ ರಂಗಸ್ಥಳದಲ್ಲಿ ಯುವಕರ ಗುಂಪು ಕಾಳಗಕ್ಕೆ ಹಿರಿಯರ ಮಾರ್ಗದರ್ಶನದಂತೆ ಅಣಿಯಾಗಲು ಸಗಣಿ ಶೇಖರಣೆಗೆ ಮುಂದಾದರು. ಶಿವಭಕ್ತರಾದ ವೀರಶೈವ ಸಮುದಾಯದ ಸಾಸಲು ಗ್ರಾಮದ ಯುವಕರು ಹಾಗೂ ಸಾಸಲುಕೊಪ್ಪಲು ಗ್ರಾಮದ ಹಾಲುಮತಸ್ಥ ಯುವಕರು ಸಗಣಿ ಕಾಳಗದಲ್ಲಿ ಭಾಗವಹಿಸಿದ್ದರು. ಎರಡು ತಂಡದ ಯುವಕರಿಗೆ ಹಿರಿಯ ಮಹಿಳೆಯರು ಸೋಮೇಶ್ವರ, ಶಂಭುಲಿಂಗೇಶ್ವರ ಕುರಿತು ಸೋಬಾನೆ ಪದ ಹಾಡುತ್ತ ಹುರಿದುಂಬಿಸಿದರು.

ಎರಡೂ ಗುಂಪಿನ ಯುವಕರು ರಾಶಿ ರಾಶಿಯಾಗಿ ಬಿದ್ದಿದ್ದ ಸಗಣಿಯನ್ನು ಕಾಲಿನಿಂದ ತುಳಿದು ಹದ ಮಾಡಿಕೊಂಡರು. ಬಳಿಕ ಚಿಕ್ಕ ಉಂಡೆಯಾಗಿ ಕಟ್ಟಿಕೊಂಡು ಹೋರಾಟಕ್ಕೆ ಸಜ್ಜಾದರು. ಸಗಣಿಯ ಉಂಡೆಯನ್ನು ಬಿರುಸಿನಿಂದ ಪರಸ್ಪರ ಎದುರಾಳಿಗಳಾಗಿ ಬೀಸಾಡಿದರು. ಅಂತಿಮವಾಗಿ ಭಕ್ತ ಜಂಗಮರ ಗುಂಪಾದ ಸಾಸಲುಕೊಪ್ಪಲು ಗ್ರಾಮದ ಯುವಕರು ವಿಜೇತರಾದರು.

ಎರಡೂ ಗುಂಪಿನವರು ಪಕ್ಕದಲ್ಲಿರುವ ಪವಿತ್ರ ಪುಷ್ಕರಿಣಿಯಲ್ಲಿ ಮಿಂದರು. ನಂತರ ಶಂಭುಲಿಂಗೇಶ್ವರ ದೇಗುಲದ ಆವರಣದಲ್ಲಿನ ಪುಷ್ಕರಿಣಿಗೂ ತೆರಳಿದರು. ದೇವರಿಗೆ ನಮಿಸಿ ಸ್ನಾನ ಮಾಡಿದರು. ತದನಂತರ ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು. ಭಕ್ತರೊಂದಿಗೆ ಸರತಿಯಲ್ಲಿ ನಿಂತು ತೀರ್ಥ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net