ಸಾಸಲು ಕೆರೆಗೆ ಹರಿಯಲಿದೆ ಹೇಮಾವತಿ

08TMK_Hemavathi_CNH
Published on

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಜನರ ಬಹುಕಾಲದ ಕನಸು ನನಸಾಗಿದ್ದು, ನಾಲೆಯಲ್ಲಿ ‘ಹೇಮೆ’ ನೀರು ಹರಿಯಲಾರಂಭಿಸಿದೆ.

ತಾಲೂಕಿನ 26 ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಪೂರೈಸುವ ನಾಲೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಜನರ ಬಹುದಿನದ ನಿರೀಕ್ಷೆಯಂತೆ ಶುಕ್ರವಾರ ನಾಲೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.

ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ರಾಜಕಾರಣಿಗಳ ಅಬ್ಬರವಿಲ್ಲದೆ ನೀರು ಹರಿಸಲು ಚಾಲನೆ ನೀಡಲಾಗಿದ್ದು ಸಾಸಲು ಕೆರೆ ತಲುಪಲಿದೆ, ಇಲ್ಲಿಂದ ಹುಳಿಯಾರು ಕೆರೆ ತಲುಪಬೇಕಿದ್ದು ನೀರಿನ ಪ್ರಮಾಣ ಹೆಚ್ಚಿಸುವ ಚಿಂತನೆಯಿದೆ. ತಿಪಟೂರು ತಾಲೂಕು ಬಿಳಿಗೆರೆ ಸರಹದ್ದಿನಲ್ಲಿ ಅಳವಡಿಸಿರುವ 0.8ಕಿಮೀ ಬಾಕ್ಸ್ ಕಲ್ವಾರ್ಟ್‌ನಲ್ಲಿ ಕಾಮಗಾರಿ ಕಾರಣಕ್ಕೆ ನಾಲೆಯಲ್ಲಿ ತಡೆದು ನಿಲ್ಲಿಸಿದ್ದ ಮಳೆದ ನೀರು ಹರಿಸಲಾಗುತ್ತಿದ್ದು ಶುಕ್ರವಾರದಿಂದ ಹೇಮೆ ಹರಿಯಲಿದೆ. ವಿವಿಧ ಸಂಘ, ಸಂಸ್ಥೆಗಳ ನಿರಂತರ ಹೋರಾಟದ ಫಲವಾಗಿ 2007ರಲ್ಲಿ ಸರ್ಕಾರದ ಅನುಮೋದನೆ ಪಡೆದಿದ್ದ ಹೇಮಾವತಿ ನಾಲೆ ಕಾಮಗಾರಿಗೆ 2012ರಲ್ಲಿ ಅಂದಿನ ಸಿಎಂ ಶಂಕುಸ್ಥಾಪನೆ ನೆರವೇರಿಸಿದ್ದರೂ ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬವಾಗಿತ್ತು.

26 ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಯೋಜನೆಗೆ 102ಕೋಟಿ ರೂ. ಹಾಗೂ ಏತನೀರಾವರಿ ಮೂಲಕ 5 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ತಾಲೂಕಿನಲ್ಲಿ ಭದ್ರಾ ಹಾಗೂ ಎತ್ತಿನಹೊಳೆ ಯೋಜನೆಗಳ ಕೆಲಸವೂ ನಡೆಯುತ್ತಿದ್ದು ಭವಿಷ್ಯದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ನೀರಾವರಿ ಸೌಲಭ್ಯ ಪಡೆಯುವ ತಾಲೂಕು ಎಂಬ ಹೆಗ್ಗಳಿಕೆಗೆ ಚಿಕ್ಕನಾಯಕನಹಳ್ಳಿ ಪಾತ್ರವಾಗಲಿದೆ.

ಈ ಕೆರೆಗಳಿಗೆ ಹರಿಯುತ್ತೆ ನೀರು: ಸಾಸಲು, ಶೆಟ್ಟಿಕೆರೆ, ದಾಸೀಹಳ್ಳಿ, ಕೊಡ್ಲಾಗರ, ಚುಂಗನಹಳ್ಳಿ, ಮಾರಸಂದ್ರ, ನವಿಲೆ, ಮೇಲನಹಳ್ಳಿ, ಅಣೇಕಟ್ಟೆ, ದಬ್ಬೇಘಟ್ಟ, ಚಿಕ್ಕನಾಯಕನಹಳ್ಳಿ, ಕಂದಿಕೆರೆ, ಮಂಚಸಂದ್ರ, ಅಜ್ಜನಕೆರೆ, ಪಟ್ಟದೇವರಕೆರೆ, ಹಾಲ್ಕುರಿಕೆ, ಕುಪ್ಪೂರು ದೊಡ್ಡಕೆರೆ, ಕುಪ್ಪೂರು ಚಿಕ್ಕಕೆರೆ, ತಮ್ಮಡಿಹಳ್ಳಿ, ಜೋಡಿ ತಿಮ್ಮಲಾಪುರ ಕೆರೆ ಹಾಗೂ ಹುಳಿಯಾರು ದೊಡ್ಡಕೆರೆ ಹಾಗೂ ಏತ ನೀರಾವರಿ ಮೂಲಕ ನಡುವನಹಳ್ಳಿ, ಜೆ.ಸಿ.ಪುರ, ಮಲಗೊಂಡನಹಳ್ಳಿ (ನಾಗೇನಹಳ್ಳಿ) ಹಾಗೂ ಬ್ಯಾಡರಹಳ್ಳಿ ಕೆರೆಗೆ ಹೇಮೆ ಹರಿಯಲಿದ್ದಾರೆ. ಗುರುತ್ವಾಕರ್ಷಣೆ ಮೂಲಕ 478.833ಂಸಿಎಫ್‌ಟಿ ನೀರು 147 ಗ್ರಾಮಗಳಿಗೆ ನೆರವಾಗುವ 21 ಕೆರೆಗಳಿಗೆ ಮತ್ತು ಲಿಫ್ಟ್ ಮೂಲಕ 34.453 ಎಂಸಿಎಫ್‌ಟಿ ನೀರು 17 ಗ್ರಾಮಗಳಿಗೆ ನೆರವಾಗುವ 4 ಕೆರೆಗಳಿಗೆ ಹರಿಯುತ್ತಿದೆ.

ಹುಳಿಯಾರು ತಲುಪಲಿದೆ ಹೇಮೆ: ಬಿಳಿಗೆರೆಯಿಂದ ಸಾಸಲು ಕೆರೆಯವರೆಗಿನ 8 ಕಿ.ಮೀ.ನಾಲೆಯಲ್ಲಿ ನೀರು ಹರಿಯುತ್ತಿದ್ದು ಅಲ್ಲಿಂದ ಮುಂದೆ ಗುರುತ್ವಾಕರ್ಷಣೆ ಮೂಲಕ ಶೆಟ್ಟಿಕೆರೆ, ತಿಮ್ಲಾಪುರ-ಜೋಡಿಕೆರೆ, ಹುಳಿಯಾರು ಕೆರೆಗಳಿಗೆ ಮೊದಲ ಹಂತದಲ್ಲಿ ನೀರು ಹರಿಯಲಿದೆ. ಗುರುತ್ವಾಕರ್ಷಣೆಯ ಮೂಲಕ ನೀರು ಹರಿಯುವುದರಿಂದ ಸ್ವಾಭಾವಿಕವಾಗಿ ಸುತ್ತಮುತ್ತಲಿನ ಅಂತರ್ಜಲ ಹೆಚ್ಚಾಗಲಿದ್ದು ರೈತರ ಬದುಕು ಉಳಿಯಲಿದೆ.

ತಾಲೂಕಿನ 21 ಕೆರೆಗಳಿಗೆ ಸೌಲಭ್ಯ: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸೌಲಭ್ಯ ಪಡೆಯುವ ಕೆರೆಗಳ ನೀರಿನ ಸಂಗ್ರಹಣಾ ಸಾಮರ್ಥ್ಯಕ್ಕೆ ಅನುಗುಣವಾಗಿ ಎಲ್ಲ ನಷ್ಟಗಳನ್ನು ಒಳಗೊಂಡಂತೆ 733 ಎಂಸಿಎಫ್‌ಟಿ ನೀರನ್ನು ತುಮಕೂರು ಶಾಖಾ ನಾಲೆ 45ನೇ ಕಿಮೀ ನಿಂದ 60 ದಿನಗಳ ಕಾಲಾವಧಿಯಲ್ಲಿ 6.85ಕಿಮೀ ಉದ್ದದ ತೆರೆದ ಫೀಡರ್ ಕಾಲುವೆ ಹಾಗೂ 11.59ಕಿಮೀ ಉದ್ದದ ಚಿಕ್ಕನಾಯಕನಹಳ್ಳಿ ಶಾಖಾ ವಿತರಣಾ ಫೀಡರ್ ಕಾಲುವೆ ಮೂಲಕ ಮತ್ತು 20.45ಕಿಮೀ ಉದ್ದದ ಹುಲ್ಕುರಿಕೆ ಶಾಖಾ ವಿತರಣಾ ಫೀಡರ್ ಕಾಲುವೆ ಮೂಲಕ ಚಿಕ್ಕನಾಯಕನಹಳ್ಳಿ ತಾಲೂಕಿನ 21 ಕೆರೆಗಳಿಗೆ ಸೌಲಭ್ಯಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net