ಸಾಸಲವಾಡ-ಹೊಳೆಇಟಗಿ ರಸ್ತೆ ಹಾಳು

14srt-1
Published on

ಶಿರಹಟ್ಟಿ: ತಾಲೂಕಿನ ಸಾಸಲವಾಡ, ಹೊಳೆಇಟಗಿ, ಛಬ್ಬಿ, ಆದ್ರಳ್ಳಿ ತಾಂಡಾ ಸೇರಿ ಬಹುತೇಕ ಗ್ರಾಮಗಳ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ರಸ್ತೆಯಲ್ಲಿನ ತಗ್ಗು-ಗುಂಡಿಗಳಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ.

ತುಂಗಭದ್ರಾ ನದಿ ಪಾತ್ರದ ತಾಲೂಕಿನ ಸಾಸಲವಾಡ- ಹೊಳೆ ಇಟಗಿ, ಛಬ್ಬಿಯಿಂದ ಆದ್ರಳ್ಳಿ ತಾಂಡಾ ರಸ್ತೆ ಹದಗೆಟ್ಟು ಹೋಗಿದೆ. ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ರಸ್ತೆ ಗುಂಡಿಗಳಲ್ಲಿ ನೀರು ನಿಂತು ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಚಕ್ಕಡಿ, ಟ್ರ್ಯಾಕ್ಟರ್, ಬಸ್ ಮತ್ತಿತರ ವಾಹನದವರು ಈ ಮಾರ್ಗದಲ್ಲಿ ಸಂಚರಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಶಾಸಕ ರಾಮಣ್ಣ ಲಮಾಣಿ ಅವರ ಸ್ವಗ್ರಾಮ ಆದ್ರಳ್ಳಿ. ಜಿಪಂ ಸದಸ್ಯ ಹುಲ್ಲಲ್ಲಿ, ತಾಪಂ ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ ಅವರ ಸ್ವಗ್ರಾಮ ಹೊಳೆಇಟಗಿ. ಹೀಗಿರುವಾಗ ರಸ್ತೆಗಳು ದುರಸ್ತಿ ಬಗ್ಗೆ ಜನಪ್ರತಿನಿಧಿಗಳ ನಿಷ್ಕಾಳಜಿಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೊಂದೆಡೆ ರಸ್ತೆ ನಿರ್ವಣ, ಸುಧಾರಣೆಗೆ ಸರ್ಕಾರದ ಅನೇಕ ಯೋಜನೆಗಳಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ದುರಸ್ತಿಪಡಿಸುತ್ತಿಲ್ಲ. ವರ್ಷದಿಂದ ಇದೇ ಸ್ಥಿತಿ ಇದೆ. ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಲಾಗಿದೆ. ರಸ್ತೆ ಅವ್ಯವಸ್ಥೆ ಕುರಿತು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಶಾಸಕರು, ಚುನಾಯಿತ ಜನಪ್ರತಿನಿಧಿಗಳು ಗಮನಹರಿಸಿ ರಸ್ತೆ ಅಭಿವೃದ್ಧಿಪಡಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ.| ನೀಲನಗೌಡ ಪಾಟೀಲ, ಸಾಸಲವಾಡ ಗ್ರಾಮಸ್ಥ

ಹಳ್ಳಿಗಳ ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ದೊರೆತ ಬಳಿಕ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗುವುದು.| ನಾಗರತ್ನ, ಎಇಇ, ಜಿಪಂ ಇಲಾಖೆ, ಶಿರಹಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net