ಸಾವಿರಾರು ಲೀಟರ್ ಪೆಟ್ರೋಲ್, ಡೀಸೆಲ್ ನಷ್ಟ

22-pnp 1a
Published on

ಪಾಂಡವಪುರ: ತಾಲೂಕಿನ ಬೇಬಿ ಗ್ರಾಮದ ಬಳಿ ಇತ್ತೀಚೆಗೆ ದುಷ್ಕರ್ಮಿಗಳು ಪೆಟ್ರೋಲ್ ಬಂಕ್‌ನ ಪಂಪ್ ಚಾಲನೆ ಮಾಡಿ ಲಕ್ಷಾಂತರ ರೂ. ಮೌಲ್ಯದ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ನೆಲಕ್ಕೆ ಹರಿ ಬಿಟ್ಟು ಹಾಳು ಮಾಡಿದ್ದಾರೆ.

ಬೇಬಿ ಗ್ರಾಮದ ಸಮೀಪವಿರುವ ಹಿರಿಯ ಹೋರಾಟಗಾರ ಹಾಗೂ ಕಾಂಗ್ರೆಸ್ ಮುಖಂಡ ಬಸ್ತಿರಂಗಪ್ಪ ಅವರ ಒಡೆತನಕ್ಕೆ ಸೇರಿದ ಬಿಎನ್‌ಜಿ ಪೆಟ್ರೋಲ್ ಬಂಕ್‌ನಲ್ಲಿ ಕಾವಲುಗಾರರು ಇಲ್ಲದ ವೇಳೆ ಪೆಟ್ರೋಲ್ ಬಂಕ್‌ಗೆ ನುಗ್ಗಿರುವ ಕಿಡಿಗೇಡಿಗಳು ಬಂಕ್‌ನ ಎಲೆಕ್ಟ್ರಿಕ್ ಕೊಠಡಿ ಬೀಗ ಒಡೆದು ಪಂಪ್‌ಗಳ ಸ್ವಿಚ್ ಆನ್ ಮಾಡಿ ಎರಡು ಪಂಪ್‌ಗಳ ನಾಲ್ಕು ಗನ್‌ಗಳನ್ನು ಆನ್ ಮಾಡಿ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ನೆಲಕ್ಕೆ ಹರಿಯ ಬಿಟ್ಟಿದ್ದಾರೆ. ಇದರಿಂದ ಬಂಕ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ತೈಲ ಭೂಮಿ ಸೇರಿದೆ. ಅಂದಾಜಿನ ಪ್ರಕಾರ 8 ಸಾವಿರ ಲೀಟರ್ ಪೆಟ್ರೋಲ್ ಹಾಗೂ 2 ಸಾವಿರ ಲೀಟರ್ ಡೀಸೆಲ್ ನೆಲಕ್ಕೆ ಹರಿದು ಹೋಗಿದೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಮಾಹಿತಿ ನೀಡಿದ್ದಾರೆ.

ಬಂಕ್‌ನಲ್ಲಿದ್ದ ಪೆಟ್ರೋಲ್‌ಹಾಗೂ ಡೀಸೆಲ್ ಜತೆಗೆ ಕೊಠಡಿಯ ವಸ್ತುಗಳನ್ನು ಧ್ವಂಸ ಮಾಡಿದ್ದು, ಪಂಪ್‌ನ ಮೀಟರ್ ಬೋರ್ಡ್‌ನ ಗ್ಲಾಸ್‌ಗಳನ್ನು ಒಡೆದು ಹಾಕಿ ವಿಕೃತಿ ಮೆರೆದಿದ್ದಾರೆ. ಬಂಕ್‌ನ ಕಾವಲಿಗಿದ್ದ ಇಬ್ಬರು ರಾತ್ರಿ ಊಟಕ್ಕೆಂದು ಪಕ್ಕದ ಅರಳಕುಪ್ಪೆ ಗ್ರಾಮಕ್ಕೆ ತೆರಳಿದ್ದ ವೇಳೆ ಮಳೆ ಸುರಿದ ಕಾರಣ ಬಂಕ್‌ಗೆ ವಾಪಸ್ಸಾಗಿರಲಿಲ್ಲ. ಇದೇ ಸಮಯ ನೋಡಿಕೊಂಡು ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ.

ಗೊತ್ತಿರುವವರಿಂದಲೇ ಕೃತ್ಯ: ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ನಿರ್ವಹಿಸಿ ಅನುಭವ ಇರುವವರಿಂದ ಮಾತ್ರ ಈ ರೀತಿ ಕೃತ್ಯ ಎಸಗಲು ಸಾಧ್ಯ. ಪೆಟ್ರೋಲ್ ಬಂಕ್‌ಗಳಲ್ಲಿ ಪಂಪ್ ಚಾಲನೆಯಾಗಬೇಕಾದರೆ ರಹಸ್ಯ ಸ್ವಿಚ್ ಅನ್ನು ಅಳವಡಿಸಲಾಗಿರುತ್ತದೆ. ಇದು ಪೆಟ್ರೋಲ್ ಬಂಕ್ ಮಾಲೀಕ ಮತ್ತು ಸಿಬ್ಬಂದಿಗೆ ಮಾತ್ರ ತಿಳಿದಿರುತ್ತದೆ. ಕೊಠಡಿಗೆ ಜಡಿದಿದ್ದ ಬೀಗ ಒಡೆದು ಸ್ವಿಚ್ ಆನ್ ಮಾಡಿದ್ದಾರೆ ಎಂದರೆ ಬಂಕ್‌ನಲ್ಲಿ ಕೆಲಸ ಮಾಡಿ ಅನುಭವ ಇರುವವರೇ ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ.

ಪೆಟ್ರೋಲ್ ಬಂಕ್ ನೂತನವಾಗಿ ಪ್ರಾರಂಭವಾದ ದಿನದಿಂದಲೂ ಸಿಸಿ ಕ್ಯಾಮರಾ ಅಳವಡಿಕೆ ಮಾಡಿರಲಿಲ್ಲ. ಘಟನೆಯಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಬಂಕ್ ಮಾಲೀಕ ಬಸ್ತಿ ರಂಗಪ್ಪ ತಿಳಿಸಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net