

ರಿಪ್ಪನ್‌ಪೇಟೆ: ಅರಣ್ಯ ವಾಸಿಗಳು ಹಾಗೂ ಮುಳುಗಡೆ ಸಂತ್ರಸ್ತ ರೈತರ ಸುದೀರ್ಘ ಹೋರಾಟವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಂಭೀರವಾಗಿ ಪರಿಗಣಿಸದಿರುವ ಪರಿಣಾಮ ಜನರು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ. ಜಡ ಸರ್ಕಾರಗಳನ್ನು ಎಚ್ಚರಿಸಬೇಕಾದರೆ ರಾಜ್ಯಾದ್ಯಂತ ಉಗ್ರ ಹೋರಾಟವೇ ಆಗಬೇಕು ಎಂದು ಶರಾವತಿ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬುಧವಾರ ಶರಾವತಿ ಮುಳುಗಡೆ ಸಂತ್ರಸ್ತರ ಹಾಗೂ ಅರಣ್ಯ ವಾಸಿ ರೈತ ಮುಖಂಡರ ಸಭೆಯಲ್ಲಿ ಮಾತನಾಡಿ, ಸರ್ಕಾರದ ಅವೈಜ್ಞಾನಿಕ ನೀತಿಯಿಂದ ರೈತರು ಇದುವರೆಗೂ ತಾವು ಉಳುಮೆ ಮಾಡುತ್ತಿರುವ ಭೂಮಿಯ ಹಕ್ಕನ್ನು ಹೊಂದಲು ಸಾಧ್ಯವಾಗಿಲ್ಲ. ಸುಪ್ರೀಂಕೋರ್ಟ್‌ಗೆ ಅರಣ್ಯ ರಕ್ಷಣೆಯ ಬಗ್ಗೆ ಪ್ರಮಾಣಪತ್ರ ಸಲ್ಲಿಸಿರುವ ಸರ್ಕಾರ, ಅಧಿಕಾರಿಗಳ ಮೂಲಕ ರೈತರ ಸಾವಿರಾರು ಮಂಜೂರಾತಿ ಅರ್ಜಿಗಳನ್ನು ಕಾರಣ ನೀಡದೆ ವಜಾಗೊಳಿಸುತ್ತಿದೆ. ಕೆಲವೇ ದಿನಗಳಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ ಎಂದರು.
ಬಿಜೆಪಿ ಸರ್ಕಾರವಿರುವ ಹರ್ಯಾಣದಲ್ಲಿ ನ್ಯಾಯಾಲಯದ ಆದೇಶದಂತೆ ನಾಲ್ಕು ಸಾವಿರ ರೈತರ ಮನೆಗಳನ್ನು ತೆರವುಗೊಳಿಸಿದ್ದಾರೆ. ನೆಲೆ ಕಳೆದುಕೊಂಡ ರೈತರು ಬೀದಿಗೆ ಬಿದ್ದಿದ್ದಾರೆ. ನಮ್ಮಲ್ಲಿಯೂ ಇಂತಹ ಆದೇಶ ಬಂದರೆ ಆಶ್ಚರ್ಯವಿಲ್ಲ. ಆದ್ದರಿಂದ ರೈತರು ಸಂಘಟಿತರಾಗಿ ಹೋರಾಡುವುದು ಅನಿವಾರ್ಯವಾಗಿದೆ ಎಂದು ತೀ.ನ.ಶ್ರೀನಿವಾಸ್ ಹೇಳಿದರು.
ಈ ಸರ್ಕಾರ ಶಾಂತಿಗೆ ಮನ್ನಣೆ ನೀಡುವುದಿಲ್ಲ. ಹಿಂಸೆಗೆ ಮಾತ್ರ ಬೆಲೆಕೊಡುತ್ತದೆ. ಈಗಲೂ ನಾವು ಸುಮ್ಮನಿದ್ದರೆ ಕಾರ್ಯವಾಗುವುದಿಲ್ಲ. ಉಗ್ರ ಹೋರಾಟವೇ ಅನಿವಾರ್ಯವಾಗಿದ್ದು ರೈತರೆಲ್ಲರೂ ಸಿಗಂದೂರಿನ ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರ ನೇತೃತ್ವದಲ್ಲಿ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಹೇಳಿದರು.