

ಹುಬ್ಬಳ್ಳಿ: ಆರ್.ಎಂ. ಲೋಹಿಯಾನಗರದಲ್ಲಿರುವ ರಾಯನಾಳ ಕೆರೆಯಲ್ಲಿ ಸಾಕಿದ್ದ ಸಾವಿರಾರು ಮೀನುಗಳು ಶನಿವಾರ ಹಠಾತ್ತನೆ ಸಾವು ಕಂಡಿವೆ.
ಕೆರೆಯಲ್ಲಿ ಸಾಕುವ ರಾಹು, ಕಾಟ್ಲಾ, ಕನ್ನಡಿ ಹಾಗೂ ಮುರುಗಲ್ ಮೀನುಗಳು ಇವು. ಬೆಳಗ್ಗೆ ಸತ್ತ ಸ್ಥಿತಿಯಲ್ಲಿ ತೇಲುತ್ತ ಕೆರೆ ದಂಡೆ ಸೇರಿವೆ. 11 ಎಕರೆ ವಿಸ್ತಾರವಿರುವ ಕೆರೆಯ ದಂಡೆಯ ಬಳಿ ಅಲ್ಲಲ್ಲಿ ನೂರಾರು ಮೀನುಗಳು ಸತ್ತು ತೇಲುತ್ತಿದ್ದವು. ಮಹಾದೇವ ಸಾಳುಂಕೆ ಎಂಬುವವರು ಮೀನುಗಾರಿಕೆ ಇಲಾಖೆಯಿಂದ ಟೆಂಡರ್ ಪಡೆದು ಮೀನು ಸಾಕಾಣಿಕೆ ಮಾಡಿದ್ದರು.
‘ಕಳೆದ ಐದು ವರ್ಷಗಳಿಂದ ಈ ಕೆರೆಯಲ್ಲಿ ಮೀನು ಸಾಕಣಿಕೆ ಮಾಡುತ್ತಿದ್ದೇವೆ. ಎಂದೂ ಹೀಗೆ ಆಗಿರಲಿಲ್ಲ. ಪ್ರತಿ ವರ್ಷ 60-70 ಸಾವಿರ ಮೀನು ಮರಿ ಬಿಡುತ್ತಿದ್ದೆವು. ಪ್ರತಿ ಮೀನು 2ರಿಂದ 4 ಕೆಜಿ ತೂಗುತ್ತಿದ್ದವು. ಇಂದಿನ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಮೀನುಗಳ ಸಾವಿನಿಂದ ಅಂದಾಜು 10 ಲಕ್ಷ ರೂ. ಹಾನಿಯಾಗಿವೆ’ ಎಂದು ಮಹಾದೇವ ಸಾಳುಂಕೆ ವಿಜಯವಾಣಿಗೆ ತಿಳಿಸಿದ್ದಾರೆ.
ಲೋಹಿಯಾನಗರ ಸುತ್ತಮುತ್ತಲಿನ ಪ್ರದೇಶದಿಂದ ಒಳಚರಂಡಿ ನೀರು ಕೆರೆಗೆ ಬಂದು ಸೇರಿದ್ದು ಮೀನುಗಳ ಸಾವಿಗೆ ಕಾರಣ ಇರಬಹುದು. ಶುಕ್ರವಾರದಿಂದ ಕೆರೆಯ ನೀರು ತಿಳಿ ಗುಲಾಬಿ ಬಣ್ಣಕ್ಕೆ ತಿರುಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ 3 ತಿಂಗಳುಗಳಿಂದ ಕೆರೆಯಿಂದ ಮೀನುಗಳನ್ನು ಎತ್ತುವಳಿ ಮಾಡಿರಲಿಲ್ಲ. ಹಾಗಾಗಿ ಅವು ದೊಡ್ಡದಾಗಿ ಬೆಳೆದಿದ್ದವು. ಅವುಗಳಿಗೆ ಇದೀಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇತ್ತು. ಮೀನುಗಳ ಸಾವಿನ ಬಗ್ಗೆ ಮೀನುಗಾರಿಕೆ ಇಲಾಖೆಯ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದ್ದಾರೆ.