ಸಾವಿರಾರು ನುಗ್ಗೆ ಗಿಡಗಳ ಮಾರಣಹೋಮ

8 RON 1 A
Published on

ರೋಣ: ತಾಲೂಕಿನಲ್ಲಿ ಕರೊನಾ ವೈರಸ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದು ತೋಟಗಾರಿಕೆ ಕೃಷಿಯನ್ನೂ ಬಿಟ್ಟಿಲ್ಲ. ತೋಟಗಾರಿಕೆ ಬೆಳೆಯನ್ನೇ ನಂಬಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ರೈತರಿಗೆ ಕರೊನಾ ವೈರಸ್ ಕಂಟಕವಾಗಿ ಪರಿಣಮಿಸಿದೆ. ಇದರಿಂದಾಗಿ ತಾಲೂಕಿನ ಹೊಸಳ್ಳಿ ಗ್ರಾಮದ ರೈತರು ಗಿಡಗಳಿಗೆ ಕೊಡಲಿ ಏಟು ಕೊಟ್ಟು ನಾಶ ಪಡಿಸುತ್ತಿದ್ದಾರೆ.

ಹೊಸಳ್ಳಿ ಗ್ರಾಮದ ರೈತ ಸಂಗಪ್ಪ ಮೆಣಸಿನಕಾಯಿ ಎಂಬುವವರು ತಮ್ಮ ಮೂರು ಎಕರೆ ಜಮೀನಿನಲ್ಲಿ 80 ಸಾವಿರ ರೂ. ಖರ್ಚು ಮಾಡಿ 3000 ಗಿಡ ಬೆಳೆಸಿದ್ದರು. ಬೆಳೆಯೂ ಸಮೃದ್ಧವಾಗಿತ್ತು. ಈ ವರ್ಷ ಮೂರು ಲಕ್ಷ ರೂ.ಗಳ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ, ಲಾಕ್​ಡೌನ್​ನಿಂದಾಗಿ ಸೂಕ್ತ ಮಾರುಕಟ್ಟೆ ಇಲ್ಲದೆ ನುಗ್ಗೆಕಾಯಿಗಳು ಗಿಡದಲ್ಲಿಯೇ ಒಣಗುತ್ತಿದ್ದವು. ಇದನ್ನು ನೋಡಲಾಗದೆ ಸಂಗಪ್ಪ ಎಲ್ಲ ಗಿಡಗಳನ್ನು ಕಡಿದಿದ್ದಾರೆ.

ಅದರಂತೆ ಅದೇ ಗ್ರಾಮದ ನುಗ್ಗೆ ಬೆಳೆಗಾರರಾದ ಕಳಕಪ್ಪ ಅಬ್ಬಿಗೇರಿ, ಕಳಕಪ್ಪ ಹೂಗಾರ, ಡಿ.ಬಿ. ಕಂಬಳಿ ಸೇರಿ ಇನ್ನಿತರ ರೈತರು ತಮ್ಮ ಹೊಲದಲ್ಲಿನ ನುಗ್ಗೆಕಾಯಿ ಗಿಡಗಳನ್ನು ಕಡಿದಿದ್ದಾರೆ. ಅಲ್ಲದೆ, ಸುತ್ತಮುತ್ತಲಿನ ಗ್ರಾಮಗಳಲ್ಲಿನ 25 ರಿಂದ 30 ಎಕರೆಯಲ್ಲಿ ಬೆಳೆದಿದ್ದ ನುಗ್ಗೆ ಗಿಡಗಳು ಕೊಡಲಿಯೇಟಿಗೆ ಬಲಿಯಾಗಿವೆ ಎಂದು ರೈತ ಸಂಗಪ್ಪ ಮೆಣಸಿನಕಾಯಿ ಹೇಳಿದರು.

ನೀರಾವರಿ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಮಕ್ಕಳಂತೆ ಜೋಪಾನ ಮಾಡಿದ ಫಲವಾಗಿ ಈ ವರ್ಷ ಉತ್ತಮ ಫಸಲು ಬಂದಿತ್ತು. ಆದರೆ, ಈ ಕರೊನಾ ವೈರಸ್​ನಿಂದಾಗಿ ಉತ್ತಮ ಲಾಭ ಪಡೆದುಕೊಳ್ಳಬೇಕೆಂದಿದ್ದ ನಮಗೆ ಬಹಳ ನಿರಾಶೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಸೂಕ್ತ ಮಾರುಕಟ್ಟೆ, ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಯಾವೊಬ್ಬ ಖರೀದಿದಾರರು ನುಗ್ಗೆಕಾಯಿ ಖರೀದಿಗೆ ಮುಂದಾಗುತ್ತಿಲ್ಲ. ಹೀಗಾಗಿ ನುಗ್ಗೆಕಾಯಿಗಳು ಗಿಡದಲ್ಲಿಯೇ ಒಣಗುತ್ತಿರುವುದನ್ನು ಕಂಡು ಎಲ್ಲ ಗಿಡಗಳನ್ನು ನಾಶ ಮಾಡಿದ್ದೇನೆ.| ಸಂಗಪ್ಪ ಮೆಣಸಿನಕಾಯಿ ನುಗ್ಗೆ ಕಾಯಿ ಬೆಳೆಗಾರ, ಹೊಸೂರ

ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನ್ನೆಲೆಯಲ್ಲಿ ಅನೇಕರು ತಮ್ಮ ಬೆಳೆಗಳನ್ನು ನಾಶಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಅಂತಹ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. | ಎಂ.ಬಿ. ತಾಂಬೂಟಿ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net