ಸಾವಿರಾರು ಕೋಟಿ ರೂ.ವೆಚ್ಚದಲ್ಲಿ ಶಾಶ್ವತ ಕಾಮಗಾರಿ

9blrp1
Published on

ಬೇಲೂರು: ನನ್ನ ಆಡಳಿತದ ಅವಧಿಯಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ಶಾಶ್ವತ ಕಾಮಗಾರಿಗಳು ನಡೆದಿದ್ದರೂ ಮಾಜಿ ಸಚಿವ ಬಿ.ಶಿವರಾಂ ಸುಳ್ಳು ಮಾಹಿತಿ ನೀಡಿ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಚೆನ್ನಕೇಶವಸ್ವಾಮಿ ದೇಗುಲ ರಸ್ತೆಯಲ್ಲಿ ಜೆಡಿಎಸ್ ನೂತನ ಕಚೇರಿ ಕಾರ್ಯಾರಂಭಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದ ಎಲ್ಲ ಜನರ ಸಮಸ್ಯೆಗಳನ್ನು ತಾಪಂ ಕಚೇರಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಬಗೆಹರಿಸಲಾಗುತ್ತದೆ. ಆದರೆ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ರಣಘಟ್ಟ ಏತ ನೀರಾವರಿ ಯೋಜನೆಗೆ ಸಮ್ಮಿಶ್ರ ಸರ್ಕಾರದ ಅವಧಿಯ ಬಜೆಟ್‌ನಲ್ಲಿ 128 ಕೋಟಿ ರೂ.ಮೀಸಲಿಟ್ಟಿದ್ದರಿಂದ ಈಗ ಕಾಮಗಾರಿ ಆರಂಭವಾಗಿದೆ. ಜತೆಗೆ ನೆಹರುನಗರದ ಹಳೇಬೀಡು ರಸ್ತೆಯಲ್ಲಿ ಅಂಬೇಡ್ಕರ್ ಭವನವನ್ನು 3 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೋಳಿ ಅಂಗಡಿ ತೆರವಿನ ನಂತರ ಬಸ್ ನಿಲ್ದಾಣ ಮುಂಭಾಗ 1.25 ಕೋಟಿ ರೂ.ವೆಚ್ಚದ ಅಂಬೇಡ್ಕರ್ ಭವನ ಶ್ರೀಘ್ರ ಉದ್ಘಾಟನೆಯಾಗಲಿದೆ. ತಾಲೂಕು ಕಚೇರಿ ಆವರಣದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ, ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಯನ್ನು ಸದ್ಯದಲ್ಲೇ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಬಸ್ ನಿಲ್ದಾಣ ಎದುರಿನ ಅಂಬೇಡ್ಕರ್ ಭವನದ ಮುಂದೆ ಬುದ್ಧರ ಪುತ್ಥಳಿ ನಿರ್ಮಾಣ ಮಾಡಲಾಗುತ್ತದೆ. ಅಲ್ಲದೆ 18 ಕೋಟಿ ರೂ. ವೆಚ್ಚದಲ್ಲಿ ತ್ರೀಸ್ಟಾರ್ ಹೋಟೆಲ್ ಕಾಮಗಾರಿ ನಡೆಯುತ್ತಿದೆ. ಇದೆಲ್ಲ ನಮ್ಮ ಕೊಡುಗೆ. ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲು ಗ್ರಾಮೀಣ ಭಾಗದಲ್ಲಿ ಹೆಚ್ಚು ಸರ್ಕಾರಿ ಆಸ್ಪತ್ರೆ ನಿರ್ಮಾಣ, ರೈತರು ಮತ್ತು ಮಹಿಳೆಯರ ಸಬಲೀಕರಣಕ್ಕೆ ಹಲವಾರು ಯೋಜನೆ ರೂಪಿಸಲಾಗಿದೆ. ಸರ್ಕಾರದ ಜತೆ ವಿಶ್ವಾಸವಿಟ್ಟು ತಾಲೂಕಿಗೆ ಅನುದಾನ ತಂದಿದ್ದೇನೆ. ಬೇಲೂರು ಕ್ಷೇತ್ರವನ್ನು ನನ್ನ ಅವಧಿಯಲ್ಲಿ 1800 ಕೋಟಿ ರೂ.ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಮಾತನಾಡಿ, ತಾಲೂಕಿನಲ್ಲಿ ನಡೆದಿರುವ ಬಹುತೇಕ ಕಾಮಗಾರಿಗಳು ಜೆಡಿಎಸ್ ಅಧಿಕಾರಕ್ಕೆ ಬಂದಿದ್ದಾಗ. 1983ರಿಂದ ತಾಲೂಕಿನ ಅಭಿವೃದ್ಧಿಗೆ ಜೆಡಿಎಸ್ ಪಕ್ಷದ ಕೊಡುಗೆ ಅಪಾರವಾಗಿದೆ. ಯಗಚಿ ಜಲಾಶಯ, ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಪದವಿ ಕಾಲೇಜು, ಯಗಚಿ ಸೇತುವೆ, ಪಾಲಿಟೆಕ್ನಿಕ್, ವಿದ್ಯಾರ್ಥಿನಿಯರ ಹಾಸ್ಟೆಲ್ ಬಿಲ್ಡಿಂಗ್, ಸಮುದಾಯ ಭವನಗಳು ನಿರ್ಮಾಣವಾಗಿವೆ. ಆದರೆ ಮಾಜಿ ಸಚಿವ ಬಿ.ಶಿವರಾಂ, ಜೆಡಿಎಸ್‌ನವರು ಏನೂ ಮಾಡಿಲ್ಲ ಎನ್ನುತ್ತಾರೆಂದರೆ ಅವರು ನಮ್ಮೊಂದಿಗೆ ಚರ್ಚೆಗೆ ಬರಲಿ, ನಾವು ಮಾಡಿರುವ ಸಾವಿರಾರು ಕೋಟಿ ರೂ. ಕೆಲಸ ಏನೆಂಬುದನ್ನು ತೋರಿಸುತ್ತೇವೆ ಎಂದರು.

ಮುಖಂಡರಾದ ಎ.ಎಂ.ನಾಗರಾಜ್, ಬಿ.ಡಿ.ಚಂದ್ರೇಗೌಡ, ಬಲ್ಲೇನಹಳ್ಳಿ ರವಿಕುಮಾರ್, ಮಲ್ಲೇಗೌಡ, ಮಹದೇವ್, ಸಿ.ಎಚ್.ಮಹೇಶ್, ಖಾದರ್, ಮೋಹನ್ ಕುಮಾರ್, ನಾಗೇಶ್, ದಿಲೀಪ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net