

ಚಿತ್ರದುರ್ಗ: ಕೈಯಲ್ಲಿ ಅಣತೆ ಹಿಡಿದು ಸಾಗಿದ ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು. ಮಾರ್ಗ ಮಧ್ಯೆ ಗಮನಸೆಳೆದ ನೀಲಿ ಬಾವುಟಗಳು. ಜೈ ಭೀಮ್ ಎಂದು ಮೊಳಗಿದ ಜಯಘೋಷ. ಮನದಾಳದ ಸ್ಮರಣೆಯೊಂದಿಗೆ ಬುಧವಾರ ನಡೆದ ಭೀಮ ಜ್ಯೋತಿ ನಮನ ಯಶಸ್ವಿಯಾಯಿತು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ಅಂಗವಾಗಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಭೀಮಯಾತ್ರೆ ಬಳಗದಿಂದ ನಡೆದ ಕಾರ್ಯಕ್ರಮದಲ್ಲಿ ಕಂಡ ದೃಶ್ಯವಿದು.
ಅಂಬೇಡ್ಕರ್ ವೃತ್ತವೂ ಪರಿನಿರ್ವಾಣ ದಿನಾಚರಣೆ ಹೆಸರಿನಲ್ಲೇ ಪುಷ್ಪಗಳಿಂದ, ವಿದ್ಯುದ್ದೀಪಾಲಂಕಾರದಿಂದ ಅಲಂಕೃತಗೊಂಡು ಬೆಳಗ್ಗೆಯಿಂದ ರಾತ್ರಿವರೆಗೂ ಗಮನ ಸೆಳೆಯಿತು. ಅಂಬೇಡ್ಕರ್ ಅವರ ಪ್ರತಿಮೆಗೆ ಬೃಹತ್ ಹೂವಿನ ಹಾರವನ್ನಾಕಿ ಗೌರವ ಸಮರ್ಪಿಸಲಾಯಿತು. ಇದೇ ಮೊದಲ ಬಾರಿ ಜ್ಯೋತಿ ನಮನವನ್ನು ವಿಶಿಷ್ಟವಾಗಿ ಆಚರಿಸಿದ್ದು, ಜನಾಕರ್ಷಣೆಯ ಕೇಂದ್ರವಾಗಿ ಮಾರ್ಪಟಿತು.
ವಿಶ್ವ ರತ್ನ: ಆರ್ಥಿಕ, ಶೈಕ್ಷಣಿಕ, ರಾಜಕೀಯ, ಕಾನೂನು ತಜ್ಞ ಈ ದೇಶದೊಳಗೆ ಯಾರಾದರೂ ಇದ್ದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಮಾತ್ರ ಎಂಬುದು ಮಹಾತ್ಮಗಾಂಧಿ, ನೆಹರು ಅವರಿಗೂ ತಿಳಿದಿತ್ತು. ಹೀಗಾಗಿ ಬಡತನ, ಅಸ್ಪಶ್ಯತೆ, ಮೇಲು-ಕೀಳು ಹೋಗಲಾಡಿಸಲು ಸಮಾನತೆಗಾಗಿ ಸಂವಿಧಾನ ರಚಿಸಿದ ಅವರು ವಿಶ್ವ ರತ್ನರಾಗಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಬಣ್ಣಿಸಿದರು.
ಮಾಜಿ ಶಾಸಕ ಜಿ.ಎಸ್.ತಿಪ್ಪಾರೆಡ್ಡಿ ಮಾತನಾಡಿ, ದೇಶದಲ್ಲಿ ಹಿಂದುಳಿದ ಮತ್ತು ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಸಂವಿಧಾನ ನ್ಯಾಯ ಒದಗಿಸುತ್ತಿದೆ. ಇದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಕಾರಣ. ಅವರ ತತ್ವಾದರ್ಶ ಅಳವಡಿಸಿಕೊಂಡು ಯುವಸಮೂಹ ಸಾಧಕರಾಗಬೇಕು ಎಂದು ಆಶಿಸಿದರು.
ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿ, ಶೋಷಣೆ ವಿರುದ್ಧ ಹೋರಾಟಗಾರರಾಗಿ, ಸಂವಿಧಾನ ಶಿಲ್ಪಿಯಾಗಿ, ಇವೆರಡರ ಹಿಂದೆ ಶಿಕ್ಷಣ ತಜ್ಞರಾಗಿ ವಿದ್ಯೆಗಿರುವ ಮಹತ್ವ ವಿಶ್ವಕ್ಕೆ ಸಾರಿದ ಅಂಬೇಡ್ಕರ್ ಅವರು ಇಂದಿಗೂ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಶಿಕ್ಷಣದಿಂದ ಮಾತ್ರ ದೇಶದ ಚಿತ್ರಣ, ಆರ್ಥಿಕ ಪ್ರಗತಿ ಸಾಧ್ಯವಿದೆ. ಹೀಗಾಗಿ ಎಲ್ಲರೂ ವಿದ್ಯಾವಂತರಾಗಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ನಾಗವೇಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪರಮೇಶ್ವರಪ್ಪ, ನಗರಸಭೆ ಪೌರಾಯುಕ್ತೆ ರೇಣುಕಾ, ಕಾಂಗ್ರೆಸ್ ಮುಖಂಡ ರಾಜಣ್ಣ, ಬಳಗದ ಸಿ.ಎಸ್.ರವೀಂದ್ರ, ಜಿ.ಶರಣಪ್ಪ, ಈ.ಎಸ್.ರವಿಕುಮಾರ್, ಟಿ.ಸತೀಶ್, ಡಿ.ಕೆ.ಕುಮಾರಸ್ವಾಮಿ, ಆರ್.ಪ್ರಕಾಶ್, ಎಸ್.ಮಂಜಣ್ಣ, ಟಿ.ರಘು ಜೆ.ಜೆ.ಹಟ್ಟಿ, ಕೃಷ್ಣಮೂರ್ತಿ, ಎಚ್.ನಟರಾಜ್, ನೂರಾರು ಅಂಬೇಡ್ಕರ್ ಅಭಿಮಾನಿಗಳು, ಇತರರಿದ್ದರು.