ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 63 ಮಂದಿಗೆ ಸೋಂಕು ; ಸಾವಿರ ಸನಿಹಕ್ಕೆ ಗುಣಮುಖರು

Corona Virusl
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳುವರ ಸಂಖ್ಯೆ ಸಾವಿರ ಸನಿಹ ತಲುಪಿದೆ. ಶನಿವಾರ ಒಂದೇ ದಿನ 86 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 917ಕ್ಕೇರಿಯಾಗಿದ್ದು, ತುಸು ನೆಮ್ಮದಿ ಉಂಟುಮಾಡಿದೆ.

ಬಕ್ರೀದ್ ಹಬ್ಬದಂದು ಹೊಸದಾಗಿ 63 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1781ಕ್ಕೇರಿದೆ. ತುಮಕೂರು ತಾಲೂಕಿನಲ್ಲಿ 20, ಪಾವಗಡದಲ್ಲಿ 10 ಮಂದಿಗೆ ಸೋಂಕು ತಗುಲಿದ್ದು, ಉಳಿದಂತೆ ಕುಣಿಗಲ್-8, ಚಿಕ್ಕನಾಯಕನಹಳ್ಳಿ -7, ತುರುವೇಕೆರೆ-6, ಕೊರಟಗೆರೆ-5, ಗುಬ್ಬಿ-3, ಶಿರಾ-2 ಹಾಗೂ ತಿಪಟೂರಿನಲ್ಲಿ ಓರ್ವರಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಒಂದೇ ದಿನ 86 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.

ತುಮಕೂರು ತಾಲೂಕು ಒಂದರಲ್ಲೇ 54 ಮಂದಿ ಗುಣಮುಖರಾಗಿದ್ದಾರೆ. ಗುಣಮುಖರ ಪ್ರಮಾಣ ಏರುತ್ತಿರುವುದು ಕರೊನಾ ಆತಂಕದ ಕಾರ್ಮೋಡ ಸರಿಸಿದೆ. ಕುಣಿಗಲ್ ತಾಲೂಕಿನ 18 ಮಂದಿ, ಪಾವಗಡ 5, ಶಿರಾ 4, ಮಧುಗಿರಿ, ತುರುವೇಕೆರೆ ತಲಾ ಇಬ್ಬರು ಹಾಗೂ ಚಿಕ್ಕನಾಯಕನಹಳ್ಳಿಯ ಓರ್ವ ಸೋಂಕಿನಿಂದ ಮುಕ್ತರಾಗಿದ್ದಾರೆ. ಈವರೆಗೆ 917 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ. ಒಟ್ಟು 810 ಸಕ್ರಿಯ ಪ್ರಕರಣವಿದ್ದು, ಐಸಿಯುನಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಿಳಾ ವೈದ್ಯಾಧಿಕಾರಿಗೆ ಸೋಂಕು : ತುರುವೇಕೆರೆ ತಾಲೂಕು ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಗೆ(32) ಸೋಂಕು ತಗುಲಿದೆ. ಸೋಂಕಿತ ವೈದ್ಯಾಧಿಕಾರಿಗೆ ಅತಿಹೆಚ್ಚು ತಲೆನೋವು, ಕೆಮ್ಮು ಕಾಣಿಸಿಕೊಂಡಿತ್ತು. ಈ ಸಂಬಂಧ ಕೋವಿಡ್ 19ರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ದೃಢಪಟ್ಟಿದೆ. ವೈದ್ಯೆಗೆ ಸೋಂಕು ತಗುಲಿದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲ ಸಿಬ್ಬಂದಿಗೆ ಆತಂಕ ಎದುರಾಗಿದ್ದು, ಎಲ್ಲರೂ ಪರೀಕ್ಷೆಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ತುರುವೇಕೆರೆ ತಾಲೂಕಿನ 11 ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕರೊನಾ ಸಂಬಂಧಿಸಿದಂತೆ ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ. ಈ ಪರೀಕ್ಷೆಯ ವರದಿ ಕೇವಲ 20 ನಿಮಿಷಗಳಲ್ಲಿ ದೊರೆಯಲಿದ್ದು, ಸಾರ್ವಜನಿಕರು ಕರೊನಾ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಯೀಮ್ ಉನ್ನಿಸ್ಸಾ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net