ಸಾವಿನಲ್ಲೂ ಸಾರ್ಥಕತೆ ಮೆರೆದ ಹೊಸಪೇಟೆ ಯುವಕ

h27-kims
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟ ಹೊಸಪೇಟೆ 31 ವಯಸ್ಸಿನ ಯುವಕ, 6 ಜನರಿಗೆ ಬೆಳಕು ನೀಡಿದ್ದಾನೆ. ಕಿಡ್ನಿ, ಲಿವರ್, ಹೃದಯ, ಕಣ್ಣುಗಳನ್ನು ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪಡೆದಿದ್ದು, ಕುಂದಗೋಳದ ಮೂಲದ 41 ವರ್ಷದ ವ್ಯಕ್ತಿಗೆ ಮಂಗಳವಾರ ಕಿಡ್ನಿ ಕಸಿ ಯಶಸ್ವಿಯಾಗಿ ನೆರವೇರಿಸಲಾಗಿದೆ.

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಈ ಯುವಕ ಸೆ. 25ರಂದು ಚಿಕಿತ್ಸೆ ಪಡೆಯಲು ದಾಖಲಾಗಿದ್ದ. 26ರಂದು ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಕುಟುಂಬದವರ ಮನವೊಲಿಸಿ, ಅಂಗಾಂಗಳನ್ನು ಪಡೆಯಲಾಯಿತು. ಲಿವರ್ ಬೆಂಗಳೂರಿನ ಸ್ಪರ್ಶ ಆಸ್ಪತ್ರೆ, ಜಯದೇವ ಆಸ್ಪತ್ರೆಗೆ ಹೃದಯ, ಒಂದು ಕಿಡ್ನಿ ಧಾರವಾಡದ ಎಸ್​ಡಿಎಂಗೆ ರವಾನಿಸಲಾಯಿತು. ಮತ್ತೊಂದು ಕಿಡ್ನಿ ಮತ್ತು ಕಣ್ಣುಗಳನ್ನು ಕಿಮ್ಸ್​ನಲ್ಲಿ ದಾಖಲಾಗಿದ್ದ ರೋಗಿಗಳಿಗೆ ಬಳಸಿಕೊಳ್ಳಲು ತೀರ್ವನಿಸಲಾಯಿತು. ಮೃತ ಯುವಕ 6 ಜನರಿಗೆ ಬೆಳಕು ನೀಡಿದ್ದಾನೆ ಎಂದು ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ‘ವಿಜಯವಾಣಿ’ಗೆ ತಿಳಿಸಿದರು.

ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಅಂಗಾಂಗಗಳನ್ನು ಸಾಗಿಸಲು ಹು-ಧಾ ಪೊಲೀಸರು ಹಸಿರು ಕಾರಿಡಾರ್ ರಚಿಸಿದ್ದರು. ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಉಪ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ, ಮೂತ್ರಪಿಂಡ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ ಮೊಗೇರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net