ಸಾವಿನ ಸುತ್ತ ಅನುಮಾನದ ಹುತ್ತ

1103kLB06
Published on

ವಾದಿರಾಜ ವ್ಯಾಸಮುದ್ರ ಕಲಬುರಗಿ
ಶಂಕಿತ ಕರೊನಾಕ್ಕೆ ಬಲಿಯಾಗಿರುವ ವೃದ್ಧನ ಸಾವಿನ ಮಾಹಿತಿ ಸೋರಿಕೆಯಾಗಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದ್ದು, ಆರೋಗ್ಯ ಇಲಾಖೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸಾಬೀತಾಗಿದೆ.
ಕರೊನಾ ಎನ್ನುವ ಪದವೇ ಜನರನ್ನು ಹೆದರಿಸುತ್ತಿರುವಾಗ ಕಲಬುರಗಿಯಲ್ಲಿ ಶಂಕಿತ ಕರೊನಾಕ್ಕೆ ಒಬ್ಬ ವೃದ್ಧ ಬಲಿಯಾಗಿದ್ದಾರೆ. ದೇಶದಲ್ಲಿಯೇ ಇದು ಮೊದಲ ಸಾವು ಎಂಬೆಲ್ಲ ಸುದ್ದಿಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಜಿಲ್ಲೆಯಷ್ಟೇ ಅಲ್ಲ ಇಡೀ ರಾಜ್ಯದ ಜನತೆ ಬೆಚ್ಚಿ ಬೀಳುವಂತಾಗಿದೆ.
ಮಹ್ಮದ ಹುಸೇನ್ ಸಿದ್ಧಿಕಿ (76) ಎನ್ನುವವರು ಮಂಗಳವಾರ ರಾತ್ರಿ ಮೃತಪಟ್ಟಿದ್ದು, ಇವರಿಗೆ ಕರೊನಾ ಶಂಕೆ ಇರಬಹುದು ಎಂದು ಅನುಮಾನಿಸಲಾಗಿದೆ. ಕರೊನಾ ಶಂಕಿತ ಮಹ್ಮದ ಹುಸೇನ್ ಸಿದ್ಧಿಕಿಯವರ ಅಂತ್ಯಕ್ರಿಯೆ ಆಗುವವರೆಗೆ ಎಲ್ಲ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಎಂ. ಎ. ಜಬ್ಬಾರ್ ತಾಲೂಕು ಆರೋಗ್ಯಾಧಿಕಾರಿ ಶರಣಬಸಪ್ಪ ಅವರಿಗೆ ಬುಧವಾರ ಬೆಳಗ್ಗೆ ಲಿಖಿತ ಮಾಹಿತಿ ನೀಡಿದರು.
ಜಬ್ಬಾರ್ ಅವರು ಶರಣಬಸಪ್ಪ ಅವರಿಗೆ ನೀಡಿದ ಲಿಖಿತ ಮಾಹಿತಿ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತು. ಇನ್ನೂ ಕರೊನಾ ಎನ್ನುವುದು ಖಾತ್ರಿ ಆಗಿಲ್ಲದಿರುವಾಗ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಮುಂಜಾಗೃತಾ ಕ್ರಮವಾಗಿ ತೆಗೆದುಕೊಂಡ ಮಾಹಿತಿ ಅದ್ಹೇಗೆ ಸೋರಿಕೆಯಾಯಿತು ಎಂಬೆಲ್ಲ ಪ್ರಶ್ನೆಗಳು ಸೃಷ್ಟಿಯಾಗಿವೆ.
ಮಾಹಿತಿ ಸೋರಲು ಕಾರಣರಾದವರು ಯಾರು ಎನ್ನುವುದನ್ನು ಪತ್ತೆ ಮಾಡಲಾಗುವುದು ಎಂಬ ಸಮಜಾಯಿಷಿ ಜಿಲ್ಲಾಧಿಕಾರಿ ಶರತ್ ನೀಡಿದ್ದಾರೆ. ಈ ಮಾಹಿತಿ ಸೋರಿಕೆ ಆಗಿರುವುದು ಸ್ವತ: ಜಿಲ್ಲಾಧಿಕಾರಿ ಮತ್ತು ಡಿಎಚ್ಓ ಅವರಿಗೆ ದಿಗಿಲು ಮೂಡಿಸಿದೆ. ಕರೊನಾ ಶಂಕಿತ ವ್ಯಕ್ತಿ ಸಾವು ಎನ್ನುವ ಮಾಹಿತಿ ಪ್ರಸಾರವಾಗುತ್ತಲೇ ಬೆಂಗಳೂರಿನಲ್ಲಿರುವ ಹಿರಿಯ ಅಧಿಕಾರಿಗಳು, ಆರೋಗ್ಯ ಸಚಿವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಯಿಂದ ವಿವರವಾದ ಮಾಹಿತಿ ಕೇಳಿದ್ದಾರೆ. ಲಭ್ಯವಾದ ಮಾಹಿತಿ ಪ್ರಕಾರ ಗುಪ್ತವಾಗಿರಬೇಕಾದ ವಿಷಯ ಅದ್ಹೇಗೆ ಬಹಿರಂಗವಾಯಿತು ಎಂಬುದು ಸಹ ಬೆಂಗಳೂರಿನಲ್ಲಿರುವ ಹಿರಿಯ ಅಧಿಕಾರಿಗಳಿಗೆ ಯಕ್ಷಪ್ರಶ್ನೆಯಾಗಿದೆ.
ಮಹ್ಮದ ಹುಸೇನ ಸಾವು ಶಂಕಿತ ಕರೊನಾದಿಂದ ಆಗಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲವಾದ್ದರಿಂದ ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಸಿದ್ಧಿಕಿ ಸಾವು ಎರಡು ಹಂತದಲ್ಲಿ ಸಂಶಯವನ್ನುಂಟು ಮಾಡಿದೆ. ಕರೊನಾ ಎನ್ನುವುದು ಖಾತ್ರಿಯಾಗುವ ಮೊದಲೇ ಆರೋಗ್ಯ ಇಲಾಖೆ ಹೇಗೆ ಶಂಕೆಯನ್ನು ಕಂಡುಕೊಂಡಿತು ಎನ್ನುವುದು ಒಂದೆಡೆಯಾದರೆ, ಇಲ್ಲಿಯ ಆಸ್ಪತ್ರೆ ಐಸೋಲೆಟೆಡ್ ವಾಡರ್್ನಲ್ಲಿದ್ದ ಸಿದ್ಧಿಕಿಯವರನ್ನು ಅವರ ಕುಟುಂಬದ ಸದಸ್ಯರು ವೈದ್ಯರ ಅನುಮತಿ ಪಡೆಯದೆ ಹೇಗೆ ಹೈದರಾಬಾದಿಗೆ ಕರೆದುಕೊಂಡು ಹೋದರು? ಅವರು ಹೈದರಾಬಾದಿಗೆ ಕರೆದುಕೊಂಡು ಹೋಗುವಾಗ ಐಸೋಲೆಟೆಡ್ ವಾಡರ್್ದಲ್ಲಿದ್ದ ವೈದ್ಯರಿಗೆ ಮಾಹಿತಿ ನೀಡಲಿಲ್ಲವೇ? ಅಥವಾ ವೈದ್ಯರಿಗೂ ಗೊತ್ತಾಗಲಿಲ್ಲವೇ? ಅವರನ್ನು ಕರೆದುಕೊಂಡು ಹೋಗಿರುವುದು ವೈದ್ಯರಿಗೆ ಗೊತ್ತಾಗಿದ್ದರೆ ಅವರೇಕೆ ತಕ್ಷಣವೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಮಾಹಿತಿ ನೀಡಲಿಲ್ಲ ಎನ್ನುವ ಪ್ರಶ್ನೆಗಳು ಕಾಡಲಾರಂಭಿಸಿವೆ.
ಕುಟುಂಬದ ಸದಸ್ಯರು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ಹೆಚ್ಚುವರಿ ಚಿಕಿತ್ಸೆಗೆ ಕರೆದುಕೊಂಡು ಹೋದರಾದರೂ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಸೂಕ್ತ ಮಾಹಿತಿ ಕುಟುಂಬದ ಸದಸ್ಯರು ನೀಡದ್ದರಿಂದ ಅವರು ಈ ವೃದ್ಧನಿಗೆ ಚಿಕಿತ್ಸೆ ನೀಡದೇ ವಾಪಸ್ಸು ಕಳಿಸಿದರು. ಸಿದ್ದಿಕಿಯವರು ವಾಪಸ್ಸು ಬರುವಾಗಲೇ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದರು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಒಟ್ಟಾರೆ ಸಿದ್ದಿಕಿ ಸಾವು ಎಲ್ಲ ರೀತಿಯಿಂದ ಅನುಮಾನಕ್ಕೆ ಕಾರಣವಾಗಿದೆ. ಒಂದು ವೇಳೆ ಇವರ ಸಾವು ಕರೊನಾದಿಂದಲೇ ಆಗಿದೆ ಎನ್ನುವುದೇನಾದರೂ ಸಾಬೀತಾದರೆ ಆಗ ಇವರ ಕುಟುಂಬದ ಸದಸ್ಯರು ಮತ್ತು ಇವರೊಡನೆ ಓಡಾಡಿದ ಜನರಿಗೆ ಹೇಗೆ ಚಿಕಿತ್ಸೆ ಕೊಡಿಸಬೇಕೆನ್ನುವ ಮತ್ತೊಂದು ತಲೆನೋವು ಆರೋಗ್ಯ ಇಲಾಖೆಗೆ ಕಾಡಬಹುದಾಗಿದೆ. ಒಂದು ವೇಳೆ ಸಿದ್ಧಿಕಿಯವರಿಗೆ ಕರೊನಾ ಶಂಕೆ ಇಲ್ಲ ಎಂದಾದರೆ ಆಗ ಎಲ್ಲವೂ ಸುಸೂತ್ರವಾಗುತ್ತದೆ. ಸಿದ್ದಿಕಿಯವರಿಗೆ ಅಸ್ತಮಾ ಇತ್ತು ಎಂಬ ಅಂಶವನ್ನು ಜಬ್ಬಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರ ಸಾವು ಅಸ್ತಮಾದಿಂದಲೇ ಆಗಿದ್ದರೆ ಆಗ ಭಯದ ಪ್ರಶ್ನೆ ಬರುವುದೇ ಇಲ್ಲ. ಕರೊನಾ ಶಂಕಿತ ವ್ಯಕ್ತಿಯ ಮೃತದೇಹವನ್ನು ಕೆಲ ಸಮಯ ಇಲ್ಲಿಯ ಸಕರ್ಾರಿ ಆಸ್ಪತ್ರೆಯ ಮಾರ್ಚರಿಯಲ್ಲಿ ಇಡಲಾಗಿತ್ತು. ಮಾರ್ಚರಿ ಬಳಿ ಸಾಕಷ್ಟು ಜನ ತಿರುಗುತ್ತಲೇ ಇದ್ದರು. ಈ ವೃದ್ಧ ಶಂಕಿತ ಕರೋನಾಕ್ಕೆ ಬಲಿಯಾಗಿದ್ದಾರೆ ಎನ್ನುವುದು ಗೊತ್ತೇ ಇರಲಿಲ್ಲ. ಹೀಗಾಗಿ ಜನರಲ್ಲಿ ಯಾವುದೇ ಭಯವೂ ಇರಲಿಲ್ಲ.

ಸಿದ್ಧಿಕಿಯವರನ್ನು ಹೈದರಾಬಾದಿಗೆ ಕರೆದುಕೊಂಡು ಹೋಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ಕುಟುಂಬದ ಸದಸ್ಯರೂ ನನಗೇನೂ ತಿಳಿಸಿಲ್ಲ. ವೈದ್ಯರು ನಮಗೆ ಮಾಹಿತಿ ನೀಡಿಲ್ಲ. ಸಿದ್ದಿಕಿಯವರು ಮೃತರಾದ ನಂತರವೇ ನನಗೆ ಎಲ್ಲ ವಿಷಯಗಳು ಗೊತ್ತಾದವು.
-ಎಂ. ಎ. ಜಬ್ಬಾರ್
ಜಿಲ್ಲಾ ಆರೋಗ್ಯಾಧಿಕಾರಿ, ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net