

ಚಾಮರಾಜನಗರ: ಬೆಂಗಳೂರು-ದಿಂಡಿಗಲ್ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಗಳಲ್ಲಿ ಸೂಕ್ತ ಸೂಚನಾ ಫಲಕ, ವಿದ್ಯುತ್ ದೀಪಗಳು ಇಲ್ಲದೇ ಹಾಗೂ ರಸ್ತೆ ಗುಂಡಿಗಳಿಂದಾಗಿ ಸಾವಿನ ಮನೆಯಾಗುತ್ತಿದೆ.
ಕೊಳ್ಳೇಗಾಲದ ಸತ್ತೇಗಾಲದಿಂದ ಚಾಮರಾಜನಗರದ ಪುಣಜನೂರಿನ ವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-209 ಕಾಮಗಾರಿ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಜಿಲ್ಲೆಯಲ್ಲಿ ಸುಮಾರು 67 ಕಿ.ಮೀ ದೂರ ಕ್ರಮಿಸುವ ಈ ಹೆದ್ದಾರಿಯಲ್ಲಿ ಕೊಳ್ಳೇಗಾಲದ ಉತ್ತಂಬಳ್ಳಿ, ಮಾಂಬಳ್ಳಿ, ಮದ್ದೂರು, ಯಳಂದೂರು, ಸಂತೇಮರಹಳ್ಳಿ, ಚಾಮರಾಜನಗರದ ದೊಡ್ಡರಾಯಪೇಟೆ ಸಮೀಪದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ಸೋಮವಾರಪೇಟೆ ಬಡಾವಣೆಯ ಸಮೀಪದಲ್ಲಿ ಬೈಪಾಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಹಳೆಯ ರಸ್ತೆಗಳು ಕೂಡುವ ಈ ಬೈಪಾಸ್ ರಸ್ತೆಗಳ ವೃತ್ತಗಳಲ್ಲಿ ಸೂಕ್ತ ರೀತಿಯ ಸೂಚನಾ ಫಲಕಗಳು, ಸ್ಪೀಡ್‌ಬ್ರೇಕ್ ಇಲ್ಲದೆ ವಾಹನ ಸವಾರರು ಅತಿ ವೇಗವಾಗಿ ಸಂಚರಿಸುವುದರಿಂದ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ರಾತ್ರಿ ವೇಳೆಯಲ್ಲಿ ಈ ವೃತ್ತಗಳಲ್ಲಿ ಸೂಕ್ತ ರೀತಿಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸದೇ ಇರುವುದರಿಂದ ವಾಹನ ಸವಾರರು ಭಯದಲ್ಲೇ ಸಂಚರಿಸುವಂತಾಗಿದೆ.
ಇನ್ನು ಚಾಮರಾಜನಗರದ ದೊಡ್ಡರಾಯಪೇಟೆ ಸಮೀಪದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸಂತೇಮರಹಳ್ಳಿ ವೃತ್ತದ ವರೆಗೂ ರಸ್ತೆಗಳಲ್ಲಿ ಬಾರಿ ಗಾತ್ರದ ಗುಂಡಿಗಳು ಬಿದ್ದಿದ್ದು, ಹಲವಾರು ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯ ಗುಂಡಿಗಳನ್ನು ಮುಚ್ಚಿ, ಬೈಪಾಸ್ ವೃತ್ತಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಯಾಣಿಕರು:
ಜಿಲ್ಲಾ ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ 2024 ರ ಜನವರಿಯಿಂದ-ಆಗಸ್ಟ್ ವರೆಗೆ 140 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಜುಲೈ ತಿಂಗಳಲ್ಲೇ 22 ಜನರು ಅಸುನೀಗಿರುವುದು ಆತಂಕವನ್ನು ಸೃಷ್ಟಿಸುತ್ತದೆ. ಅಕ್ಟೋಬರ್‌ವರೆಗೆ ಅದು ಸುಮಾರು 150 ದಾಟಿರಬಹುದು ಎಂದು ಹೇಳಲಾಗುತ್ತಿದೆ. ನೂರಾರು ಜನರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಹೆದ್ದಾರಿಯ ಬೈಪಾಸ್ ವೃತ್ತಗಳಲ್ಲಿ ಸೂಕ್ತ ರೀತಿಯ ಸೂಚನಾ ಫಲಕ, ಬ್ರೇಕ್ ಸ್ಪೀಡ್ ಇಲ್ಲದೇ ಇರುವುದು, ಅತಿಯಾದ ವೇಗದಲ್ಲಿ ಬೈಕ್ ಚಾಲನೆ ಮಾಡುವುದು ಹಾಗೂ ಹೆಲ್ಮೆಟ್ ಧರಿಸದೇ ಇರುವುದು ಅಪಘಾತದಲ್ಲಿ ಸಾವು-ನೋವು ಹೆಚ್ಚಾಗುವುದಕ್ಕೆ ಕಾರಣವಾಗುತ್ತಿದೆ.
ಡೇಂಜರ್ ಸ್ಥಿತಿಯಲ್ಲಿ ಬೈಪಾಸ್:
ರಾಷ್ಟ್ರೀಯ ಹೆದ್ದಾರಿ-209 ರಲ್ಲಿ ಹಾದು ಹೋಗಿರುವ ಅಗರ-ಮಾಂಬಳ್ಳಿ, ಮದ್ದೂರು, ಸಂತೇಮರಹಳ್ಳಿ ಗ್ರಾಮಗಳ ಹೊರ ಭಾಗದಲ್ಲಿ ಬೈಪಾಸ್ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಕೊಳ್ಳೇಗಾಲದ ಉತ್ತಂಬಳ್ಳಿ, ಯಳಂದೂರು ಮತ್ತು ಚಾಮರಾಜನಗರದ ಹೊರ ಭಾಗದಲ್ಲೂ ಬೈಪಾಸ್ ರಸ್ತೆ ಹಾದು ಹೋಗಿದ್ದು, ಮೇಲ್ಸೇತುವೆಗಳು ನಿರ್ಮಾಣವಾಗಿದೆ. ಈ ಸ್ಥಳಗಳು ಸಂಚಾರಕ್ಕೆ ಡೇಂಜರ್ ಆಗಿದ್ದು, ಪ್ರಯಾಣಿಕರು ಆತಂಕದಲ್ಲೇ ಸಂಚರಿಸುವಂತಾಗಿದೆ. ಹೆದ್ದಾರಿಯಲ್ಲಿ ವೇಗವಾಗಿ ವಾಹನ ಸಂಚರಿಸುತ್ತವೆ, ಇದರಿಂದ ಹಳೆಯ ರಸ್ತೆಗಳಿಂದ ಬರುವ ವಾಹನಗಳಿಗೆ ಸಮಸ್ಯೆಯಾಗುತ್ತಿದೆ. ಮೇಲ್ಸೆತುವೆ ಇರುವ ಕಡೆಗಳಲ್ಲಿ ಒಂದು ರಸ್ತೆಯಿಂದ ಬರುವ ವಾಹನಗಳು, ಮತ್ತೊಂದು ರಸ್ತೆಯಲ್ಲಿ ಎದುರಾಗುವವರಿಗೆ ಕಾಣುವುದಿಲ್ಲ. ಆಗಾಗಿ ಈ ರಸ್ತೆಗಳಲ್ಲಿ ಸಂಚಾರಕ್ಕೆ ತುಂಬಾ ಸಮಸ್ಯೆ ಉಂಟಾಗುತ್ತಿದೆ.
ರಸ್ತೆಗುಂಡಿಗಳಿಂದ ಪ್ರಾಣಹಾನಿ:
ನಗರದ ಸಂತೇಮರಹಳ್ಳಿ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ತಾರು ಗುಂಡಿಗಳು ಬಿದ್ದಿದ್ದು, ಇದರಿಂದ ಹಲವಾರು ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಇರುವ ಸೇತುವೆಯಲ್ಲಿ ದೊಡ್ಡದಾದ ಗುಂಡಿಯಾಗಿದ್ದು, ಕಬ್ಬಿಣದ ಸರಳು ಕಿತ್ತುಬಂದಿದೆ. ಅದಾಗ್ಯೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸದೇ, ರಾತ್ರಿಯ ವೇಳೆಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸಂತೇಮರಹಳ್ಳಿ ವೃತ್ತದ ವರೆಗೂ ಪ್ರಾಣಭಯದಲ್ಲೇ ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆಯ ಗುಂಡಿಗಳನ್ನು ಮುಚ್ಚಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಹಳೆಯ ರಸ್ತೆಗಳಿಂದ ಬೈಪಾಸ್ ರಸ್ತೆಗಳಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ. ರಾತ್ರಿಯ ವೇಳೆಯಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದೇ ಅಪಘಾತಗಳು ಸಂಭವಿಸುತ್ತಿದೆ. ಹೆದ್ದಾರಿಯ ಗುಂಡಿಗಳಿಂದ ದ್ವಿಚಕ್ರ ವಾಹನ ಸವಾರರು ಅಪಘಾತವಾಗಿ ಪ್ರಾಣಕಳೆದುಕೊಳ್ಳುತ್ತಿದ್ದಾರೆ.
ನಾಗೇಶ್, ಆಟೋ ಚಾಲಕ, ಆಲೂರು, ಚಾಮರಾಜನಗರ
ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದ ರಸ್ತೆ ಸುರಕ್ಷಾ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡಲಾಗಿದೆ. ಬೈಪಾಸ್ ಹಾದುಹೋಗಿರುವ ಕಡೆಗಳಲ್ಲಿ ಸೂಕ್ತ ರೀತಿಯ ಸೂಚನಾ ಲಕಗಳು, ವಿದ್ಯುತ್ ದೀಪಗಳು ಅಳವಡಿಕೆ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಹೆದ್ದಾರಿ ಕಾಮಗಾರಿ ಸಂಪೂರ್ಣವಾಗಿ ಮುಗಿದಾಗ ಎಲ್ಲವೂ ಸಿದ್ಧವಾಗುತ್ತದೆ.
ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ