

ಕಲಬುರಗಿ: ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆಗೊಳಗಾಗಿ ಸಾವಿನ ದವಡೆಗೆ ಸಿಲುಕಿದ್ದ ಯುವಕನೊಬ್ಬನಿಗೆ ಇಲ್ಲಿನ ಯುನೈಟೆಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಜ್ಞ ವೈದ್ಯರ ತಂಡ ಯಶಸ್ವಿ ಬಹುವಿಧ ಶಸ್ತ್ರ ಚಿಕಿತ್ಸೆ (ಮಲ್ಟಿಪಲ್ ಸರ್ಜರಿ) ನಡೆಸಿ ಮರುಜೀವ ನೀಡಿದೆ.
ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಗಂಗಾಧರ(33) ಯಶಸ್ವಿ ಚಿಕಿತ್ಸೆ ಬಳಿಕ ಸಂಪೂರ್ಣ ಚೇತರಿಸಿಕೊಂಡಿದ್ದು, ಸಾವು ಗೆದ್ದು ಬಂದ ಖುಷಿಯಲ್ಲಿದ್ದಾನೆ. ಮೂಗು, ಬಾಯಿ, ಕಣ್ಣಿನ ಭಾಗ ಪೂರ್ಣ ಕಿತ್ತುಹೋಗಿ ತೀವ್ರ ರಕ್ತಸ್ರಾವವಾಗಿದ್ದರಿಂದ ಬದುಕುಳಿಯುವುದೇ ಅಸಾಧ್ಯವೆಂಬ ಸ್ಥಿತಿಯಲ್ಲೂ ವೈದ್ಯರ ತಂಡ ಸವಾಲಿನೊಂದಿಗೆ ಯಶಸ್ವಿ ಚಿಕಿತ್ಸೆ ನೀಡಿ ವೈದ್ಯಕೀಯ ಕ್ಷೇತ್ರ ಹುಬ್ಬೇರಿಸುವಂತೆ ಮಾಡಿದೆ.
ಕಳೆದ ಏಪ್ರಿಲ್ 11ರಂದು ಗಂಗಾಧರ ಹಾಗೂ ಈತನ ಮಾವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಮಾವ ಸ್ಥಳದಲ್ಲೇ ಮೃತಪಟ್ಟರೆ, ಗಂಗಾಧರ ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದ. ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಎಂಎಲ್ಸಿ ಮಾಡಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿದರು. ಸಮಗ್ರ ತಪಾಸಣೆ ನಡೆಸಿದ ವೈದ್ಯರು ಏ.12ರಂದು ಐದು ಗಂಟೆ ಯಶಸ್ವಿ ಸರ್ಜರಿ ನಡೆಸಿದ್ದಾರೆ. ಹತ್ತಕ್ಕೂ ಹೆಚ್ಚು ತಜ್ಞ ವೈದ್ಯರ ಟೀಮ್ ಈತನಿಗೆ ಚಿಕಿತ್ಸೆ ನೀಡಿ ಬದುಕುಳಿಸಿದ್ದಾರೆ.
ಆಸ್ಪತ್ರೆ ನಿರ್ದೇಶಕಿಯೂ ಆದ ನೇತ್ರ ತಜ್ಞೆ ಡಾ.ವೀಣಾ ವಿಕ್ರಮ ಸಿದ್ದಾರಡ್ಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಗಂಗಾಧರ ಬದುಕಿಳಿದಿರುವುದು ಚಿಕಿತ್ಸೆ ನೀಡಿದ ವೈದ್ಯರಿಗೆ ಖುಷಿ ನೀಡುವ ಜತೆಗೆ ಅಚ್ಚರಿಯೂ ಮೂಡಿಸಿದೆ. ಇದು ಪವಾಡ ಎಂದರೂ ತಪ್ಪಾಗಲಿಕ್ಕಿಲ್ಲ. ಯುವಕನ ಮೂಗು ಸಂಪೂರ್ಣ ಕಟ್ ಆಗಿತ್ತು. ಎಲುಬು ಸಹಿತ ಮುಖ ಕಿತ್ತು ಮತ್ತೊಂದು ಬದಿಗೆ ಬಂದಿತ್ತು. ಡೀಪ್ ಇಂಜೂರಿಯಾಗಿದ್ದಕ್ಕೆ ಉಸಿರಾಟದ ತೊಂದರೆ ಕಾಣಿಸಿತ್ತು. ಎರಡೂ ಕಣ್ಣುಗಳು ಶಾಶ್ವತ ದೃಷ್ಟಿ ಕಳೆದುಕೊಳ್ಳುವ ಹಂತದಲ್ಲಿದ್ದವು. ನರಗಳ ಸಮಸ್ಯೆಯಾಗಿ ಮಿದುಳು ನಿಷ್ಕ್ರೀಯದ ಅಪಾಯವಿತ್ತು. ಇಂಥ ಕೇಸ್ ಹ್ಯಾಂಡಲ್ ಮಾಡಿದ ವೈದ್ಯರ ತಂಡದ ಸಾಧನೆ ಅಭಿನಂದನಾರ್ಹ ಎಂದರು.
ಓಎಂಎಫ್ ಸರ್ಜನ್ ಡಾ.ಉಡುಪಿ ಕೃಷ್ಣ ಜೋಶಿ ಮಾತನಾಡಿ, 11 ದಿನ ಐಸಿಯು ಸೇರಿ ಒಟ್ಟು 38 ದಿವಸ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದು ಗುಣಮುಖನಾಗಿದ್ದಾನೆ. ಹಲ್ಲೆ ನಡೆದ ಐದಾರು ಗಂಟೆಯ ನಂತರ ಆಸ್ಪತ್ರೆಗೆ ಈತನಿಗೆ ತಂದಿದ್ದರು. 2 ಲೀಟರ್ನಷ್ಟು ರಕ್ತಸ್ರಾವ ಆಗಿತ್ತು. ಅಗತ್ಯ ರಕ್ತ ನೀಡುವ ಜತೆಯಲ್ಲಿ ಕಣ್ಣು, ಕಿವಿ ಮತ್ತು ಮೂಗು ಸೇರಿ ಮುಖದ ಮರು ನಿರ್ಮಾಣದ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ವಿವರಿಸಿದರು. ವೈದ್ಯರಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಕಡಿಮೆ ಎಂದು ಹಾಜರಿದ್ದ ಗಂಗಾಧರ ಭಾವುಕನಾಗಿ ಹೇಳಿದ.
ಶಾಶ್ವತ ಕುರುಡುತನದಿಂದ ಪಾರು: ಕಣ್ಣಿನ ಭಾಗದಲ್ಲಿ ಆಳವಾದ ಪೆಟ್ಟು ಬಿದ್ದ ಕಾರಣ ನರಗಳಿಗೆ ಡ್ಯಾಮೇಜ್ ಆಗಿತ್ತು. ಒಂದು ಕಣ್ಣು ಶಾಶ್ವತ ದೃಷ್ಟಿ ಕಳೆದುಕೊಂಡಿತ್ತು. ಇನ್ನೊಂದು ಕಣ್ಣು ಸಹ ಇದೇ ಸ್ಥಿತಿಗೆ ಸಾಗಿ ಕುರುಡಾಗುವ ಅಪಾಯ ಎದುರಾಗಿತ್ತು. ನೇತ್ರ ತಜ್ಞೆ ಡಾ.ವೀಣಾ ವಿಕ್ರಮ ಸಿದ್ದಾರಡ್ಡಿ ಅವರು ಸಾಕಷ್ಟು ಕಾಳಜಿ ವಹಿಸಿ, ಸಮಯಪ್ರಜ್ಞೆ ಮೆರೆದು ಸರ್ಜರಿ ನಡೆಸುವ ಮೂಲಕ ಒಂದು ಕಣ್ಣಿನ ದೃಷ್ಟಿ ಉಳಿಸಿಕೊಂಡಿದ್ದಾರೆ. ಗಂಗಾಧರನ ಚಿಕಿತ್ಸೆಯು ಯುನೈಟೆಡ್ ಆಸ್ಪತ್ರೆ ಸಾಧಿಸಿದ ಮತ್ತೊಂದು ಮೈಲಿಗಲ್ಲು ಎನಿಸಿದೆ.
ಹೀಗಿತ್ತು ಡಾಕ್ಟರ್ ಟೀಮ್: ಈಎನ್ಟಿ ಸರ್ಜನ್, ಮ್ಯಾಕ್ಸಿಲೋಫೇಸಿಯಲ್(ಓಎಂಎಫ್) ಸರ್ಜನ್, ಪ್ಲಾಸ್ಟಿಕ್ ಸರ್ಜನ್, ನ್ಯೂರೋ ಸರ್ಜನ್, ಅಪ್ತಮಾಲಜಿಸ್ಟ್, ಅನಸ್ತೇಷಿಯನ್ಸ್ ತಜ್ಞ ವೈದ್ಯರಾದ ಡಾ.ವಿನಯಸಾಗರ ಶರ್ಮಾ, ಡಾ.ಕೇದಾರನಾಥ ರಟಕಲ್, ಡಾ.ಮಂಜುನಾಥರಡ್ಡಿ, ಡಾ.ಲಿಯಾಖತ್ ಅಲಿ, ಡಾ.ಪವನ್ ಪಾಟೀಲ್, ಡಾ.ಉಡುಪಿ ಕೃಷ್ಣ ಜೋಶಿ, ಡಾ.ವೀಣಾ ವಿಕ್ರಮ ಸಿದ್ದಾರಡ್ಡಿ, ಡಾ.ರಾಜು ಕುಲಕರ್ಣಿ, ಡಾ.ಅಯೇಶಾ ಎಸ್, ಡಾ.ಸುದರ್ಶನ ಲಾಖೆ, ಡಾ.ಶ್ರೀಕಾಂತ ರಾಠೋಡ್,ಡಾ.ರಾಕೇಶ ಬೇಂದ್ರೆ, ಡಾ.ಆನಂದ ಮಠ ಇತರರು ಚಿಕಿತ್ಸಾ ತಂಡದಲ್ಲಿದ್ದರು.
ಕಲ್ಯಾಣ ಕನರ್ಾಟಕ ಭಾಗದಲ್ಲಿ ಆಸ್ಪತ್ರೆ ಟ್ರಾಮಾ, ಕ್ರಿಟಿಕಲ್ ಕೇರ್ಗೆ ಒತ್ತು ನೀಡಿ ಕೆಲಸ ಮಾಡುತ್ತಿದೆ. ತಜ್ಞ ವೈದ್ಯರು, ಅತ್ಯಾಧುನಿಕ ಉಪಕರಣ, ಹೈಟೆಕ್ ಆಪರೇಷನ್ ಥೇಟರ್, ಲ್ಯಾಬ್ ವ್ಯವಸ್ಥೆಯಿದ್ದು, ಉತ್ತಮ ಚಿಕಿತ್ಸೆ ಕೊಡುವುದಕ್ಕಾಗಿ ಅವಿರತ ಪ್ರಯತ್ನಿಸಲಾಗುತ್ತಿದೆ. ಗಂಗಾಧರ ಚಿಕಿತ್ಸೆಯನ್ನು ವೈದ್ಯರು ಸವಾಲಾಗಿ ಸ್ವೀಕರಿಸಿ, ಯಶಸ್ಸು ಕಂಡಿದ್ದಾರೆ. ಈತ ಬದುಕಿದ್ದು ಮಿರ್ಯಾಕಲ್.
| ಡಾ.ವೀಣಾ ವಿಕ್ರಮ ಸಿದ್ದಾರಡ್ಡಿ
ನೇತ್ರತಜ್ಞೆ ಹಾಗೂ ಯುನೈಟೆಡ್ ಆಸ್ಪತ್ರೆ ನಿರ್ದೇಶಕಿ