

ಹೂವಿನಹಡಗಲಿ: ತಾಲೂಕಿನ ಮದಲಗಟ್ಟಿ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ, ನದಿಗೆ ತೆರಳುವ ಮಾರ್ಗ ಹಾಗೂ ನದಿ ದಡದಲ್ಲಿ ಸೂಚನಾ ಫಲಕ ಅಳವಡಿಸುವುದರೊಂದಿಗೆ ಸುತ್ತತೂ ಜೆಸಿಬಿಯಿಂದ ಗುಂಡಿ ತೋಡಿ ಜನರ ಪ್ರವೇಶ ಹಾಗೂ ವಾಹನಗಳ ಸಂಚಾರವನ್ನು ತಡೆಗಟ್ಟಲು ತಾಲೂಕು ಆಡಳಿತ ಕ್ರಮ ಕೈಗೊಂಡಿದೆ.
ಮದಲಗಟ್ಟಿಯ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ಜನರು ಮೃತಪಟ್ಟಿದ್ದ ಪ್ರಕರಣಗಳು ನಡೆದಿದ್ದವು. ಇದಕ್ಕೆ ತಾಲೂಕು ಆಡಳಿತ ಬೇಜವಾಬ್ದಾರಿಯಿಂದ ಘಟನೆಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಜಯವಾಣಿಯಲ್ಲಿ ಶುಕ್ರವಾರ ‘ಮದಲಗಟ್ಟಿ ಸೇತುವೆ ಸಾವಿಗೆ ದಾರಿ’ ಶೀರ್ಷಿಕೆಯಡಿ ವಿಶೇಷ ವರದಿ ವರದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಹಾಗೂ ಕೊಂಬಳಿ ಗ್ರಾಪಂ ಅಧಿಕಾರಿಗಳು ನದಿ ದಡದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ನದಿಯನ್ನು ಪ್ರವೇಶಿಸುವ ರಸ್ತೆಯನ್ನು ಜೆಸಿಬಿಯಿಂದ ಗುಂಡಿ ತೋಡಿ ವಾಹನ ಹಾಗೂ ಜನರ ಪ್ರವೇಶ ನಿಷೇಧಿಸಿದೆ. ಇನ್ನಾದರೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ.