ಸಾವರ್ಕರ್ ನೆಹರೂ ಹೋಲಿಕೆ ಸಲ್ಲ

27 ald 2 web
Published on

ಆಲ್ದೂರು: ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಪಾತ್ರ ಶೂನ್ಯ. ಸಾವರ್ಕರ್ ಅವರನ್ನು ನೆಹರೂ ಅವರಿಗೆ ಹೋಲಿಕೆ ಮಾಡುವುದು ಸೂಕ್ತವಲ್ಲ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು. ಆಲ್ದೂರು ಬ್ಲಾಕ್ ಕಾಂಗ್ರೆಸ್​ನಿಂದ 75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಶನಿವಾರ ಭೂತನಕಾಡಿನಿಂದ ಆಲ್ದೂರುವರೆಗೆ ಪಾದಯಾತ್ರೆ ನಡೆಸಿ ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾರೋಪದಲ್ಲಿ ಮಾತನಾಡಿದರು.

ಸಾವರ್ಕರ್ ಬ್ರಿಟಿಷರ ಹತ್ತಿರ ನಾನು ಸ್ವಾತಂತ್ರ್ಯ ಹೋರಾಟಕ್ಕೆ ಹೋಗುವುದಿಲ್ಲ. ನಾನು ನಿಮ್ಮ ಸೇವೆ ಮಾಡಿಕೊಂಡುರುತ್ತೇನೆ. ನನ್ನನ್ನು ಬಿಡುಗಡೆ ಮಾಡಿ ಎಂದು ಪತ್ರ ಬರೆದು ಕ್ಷಮೆ ಕೇಳುತ್ತಾರೆ. ಆದರೆ ನೆಹರೂ ಅವರು ಪತ್ನಿಗೆ ಪತ್ರ ಬರೆದು, ಬ್ರಿಟಿಷರು ನನ್ನನ್ನು ಬಂಧನ ಮಾಡಿದ್ದಾರೆ. ನನ್ನನ್ನು ಬಿಡುತ್ತಾರೋ ಇಲ್ಲವೋ ಎಂದು ತಿಳಿಸಿದ್ದರು. ಇದೇ ನೆಹರೂ ಹಾಗೂ ಸಾವರ್ಕರ್ ಅವರಿಗೆ ಇರುವ ವ್ಯತ್ಯಾಸ ಎಂದರು. ಬಿಜೆಪಿ ದೇಶವನ್ನು ಉತ್ತರ ಭಾರತ, ದಕ್ಷಿಣ ಭಾರತ ಎಂದು ವಿಭಜಿಸಲು ಹೊರಟಿದೆ. ಇಂದಿರಾ ಗಾಂಧಿ ಅವರ ರಕ್ತ ಉತ್ತರ ಭಾರತದಲ್ಲಿ ಬಿದ್ದಿದ್ದರೆ, ದಕ್ಷಿಣ ಭಾರತದಲ್ಲಿ ರಾಜೀವ್ ಗಾಂಧಿ ಅವರ ರಕ್ತ ಹರಿದಿದೆ. ದೇಶವನ್ನು ಒಂದುಗೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಬಿಜೆಪಿ ಜತೆ ಹೋರಾಡಿ ಅಧಿಕಾರ ಮರಳಿ ಪಡೆಯಬೇಕಿದೆ. ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ, ಬಿಜೆಪಿಯನ್ನು ಅಧಿಕಾರದಿಂದ ತೆಗೆದು ಹಾಕಲು ಶಪಥ ಮಾಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net