

ಬಾಗಲಕೋಟೆ: ಸಾವಯವ ಪದ್ಧತಿಯಿಂದ ಆರೋಗ್ಯಕರವಾದ ಆಹಾರ ದಾನ್ಯಗಳನ್ನು ಬೆಳೆಯುವ ಮೂಲಕ ಉತ್ತಮ ಜೀವನ ಪಡೆಯಬಹುದಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ತೋವಿವಿಯ ಉದ್ಯಾನಗಿರಿಯಲ್ಲಿ ಶನಿವಾರ ಜರುಗಿದ ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ರೈತರು ಕೃಷಿಯಲ್ಲಿ ಸಾವಯವ ಪದ್ಧತಿ ಬಳಸುವತ್ತ ಮುಂದಾಗಬೇಕು. ಆರೋಗ್ಯಕರವಾದ ಬೆಳೆ ಹಾಗೂ ಸುಸ್ಥಿರ ಕೃಷಿಗೆ ಬಗ್ಗೆ ಸಂಶೋಧಕರು ಚಿಂತನೆ ನಡೆಸುತ್ತಿದಾರೆ. ಕಳೆದ ೪೦ ವರ್ಷಗಳಲ್ಲಿ ರಾಸಾಯನಿಕ ಬಳಕೆ ಮಾಡಿತ್ತಿರುವದರಿಂದ ಮಣ್ಣಿ ಸತ್ವ ಕಡಿಮೆಯಾಗುತ್ತಿದೆ ಎಂದರು.
ಮಾರುಕಟ್ಟೆಯಲ್ಲಿ ದವಸದಾನ್ಯ, ಹಣ್ಣು-ಹಂಪಲಗಳನ್ನು ಖರೀದಿ ಸಂದರ್ಭದಲ್ಲಿ ಸಾವಯವ ಪದ್ಧತಿಯಿಂದ ಬೆಳೆದ ಬಗ್ಗೆ ಖಚಿತಪಡಿಸಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆ ಕಾಲ ಈಗ ಬಂದಿದ್ದು, ಸಾವಯುವ ಬದುಕಿನ ಜೀವನಾಡಿಯಾಗಿ ಪರಿಣಮಿಸಿದೆ. ಒತ್ತಡದ ಬದುಕಿನಲ್ಲಿ ವಿವಿಧ ಖಾಯಿಲೆಗಳಿಗೆ ತುತ್ತಾಗಬಾರದು. ಮುಂದಿನ ಪೀಳಿಗೆ ಆರೋಗ್ಯಯುವ ಜೀವನದ ಬಗ್ಗೆ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.
ವಿಧಾನ ಪರಿಷತ್ತಿನ ಸದಸ್ಯ ಹನಮಂತ ನಿರಾಣಿ ಮಾತನಾಡಿ, ತೋಟಗಾರಿಕೆ ಬೆಳೆಗಳಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಮೇಳಗಳನ್ನು ಏರ್ಪಡಿಸುವ ಮೂಲಕ ರೈತರಿಗೆ ಉತ್ತೇಜನ ನೀಡುವ ಕಾರ್ಯ ತೋವಿವಿಯ ಮಾಡುತ್ತಿದೆ. ಭೂಮಿಯ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ಹನಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ನೀರು ಇಲ್ಲದೇ ಬದುಕುವುದು ಸಾಧ್ಯವಿಲ್ಲ. ಯುವಕರು ಕೃಷಿ ಕ್ಷೇತ್ರಕ್ಕೆ ಬರಬೇಕು. ಕೃಷಿ ಉದ್ಯಮಿಯಾಗಿ ಪರಿವರ್ತನೆಯಾದರೆ ಮಾತ್ರ ರೈತರನ್ನು ಸಶಕ್ತರನ್ನಾಗಿ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ನೀಡಿ ಆರೋಗ್ಯಕರ ಜೀವನ ನಡೆಸುವಂತಾಗಲು ಎಲ್ಲರೂ ಮುಂದಾಗಬೇಕು ಎಂದರು.
ವಿಸ್ತರಣಾ ನಿರ್ದೇಶಕ ಪಿ.ನಾರಾಯಣಗೌಡ ಮಾತನಾಡಿ, ವಹಿವಾಟುದಾರರಿಗೆ ತರಬೇತಿ ಹಾಗೂ ಕೌಶಲ ಅಭಿವೃದ್ಧಿಸುವ ಮೂಲಕ ಜ್ಞಾನದ ಬೆಳೆ ಹೆಚ್ಚಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ, ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಡಾ.ಎಂ.ಶಿವಮೂರ್ತಿ, ಎನ್.ಕೆ.ಹೆಗಡೆ, ಡಾ.ರವೀಂದ್ರ ಮುಲಗೆ, ಡಾ.ಟಿ.ಬಿ.ಅಳ್ಳೊಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.