

ಕಡೂರು: ಸಮಗ್ರ ಕೃಷಿ ಉತ್ಪಾದನೆಯಲ್ಲಿ ಸಾವಯವ ಕೃಷಿ ನಿರ್ವಹಣಾ ಪದ್ಧತಿ ಅಳವಡಿಸಿಕೊಂಡರೆ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬಹುದು ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಎಚ್.ಕೆ.ಜಯದೇವಪ್ಪ ತಿಳಿಸಿದರು.
ಅಂದೇನಹಳ್ಳಿಯಲ್ಲಿ ಚಿಕ್ಕಮಗಳೂರು ಸಾವಯವ ರೈತರ ಬಳಗದಿಂದ ಮಾಸಿಕ ತೋಟದ ಭೇಟಿ ಕಾರ್ಯಕ್ರಮದಲ್ಲಿ ಕೃಷಿಕ ಯತಿರಾಜ್ ಅವರ ತೋಟದಲ್ಲಿ ಶನಿವಾರ ಸಾವಯವ ಕೃಷಿ ಪದ್ಧತಿ ಕುರಿತು ರೈತರಿಗೆ ಮಾಹಿತಿ ನೀಡಿದರು.
ಅಡಕೆ, ತೆಂಗಿಗೆ ಹೆಚ್ಚು ಒತ್ತುಕೊಡುವಂತೆ ಮಿಶ್ರಬೆಳೆಗಳಿಗೂ ಆದ್ಯತೆ ನೀಡಿದರೆ ಹೆಚ್ಚಿನ ಆದಾಯ ಪಡೆದುಕೊಳ್ಳಬಹುದಾಗಿದೆ. ಕೇವಲ ಅಡಕೆ ಬೆಳೆಗೆ ಅವಲಂಬಿತರಾದರೆ ಭೂಮಿಯ ಸತ್ವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಾಸಾಯನಿಕ ಸಿಂಪಡಣೆಯಿಂದ ಫಲವತ್ತತೆಗೆ ಸಾಕಷ್ಟು ಹಾನಿ ಉಂಟಾಗಲಿದೆ. ರೈತರು ಆಯಾ ಕಾಲಕ್ಕೆ ಅನುಗುಣವಾಗಿ ತೋಟಗಳಿಗೆ ಬಾಳೆ, ಮಸಾಲೆ ಪದಾರ್ಥಗಳ ಮಿಶ್ರಬೆಳೆ ಬೆಳೆಯಲು ಪ್ರಾಮುಖ್ಯತೆ ನೀಡಿದರೆ, ಇಲಾಖೆಯಿಂದ ಅಗತ್ಯ ಮಾಹಿತಿ ನೀಡಲಾಗುತ್ತದೆ ಎಂದರು.
ಸಾವಯವ ಕೃಷಿಕ ಯತಿರಾಜ್ ಮಾತನಾಡಿ, ಮೂರು ವರ್ಷಗಳ ಹಿಂದೆ 110 ಕೋಕೊ ಗಿಡಗಳನ್ನು ನಾಡಿ ಮಾಡಿದೆ. ಸಾವಯವ ಪದ್ಧತಿ ಅಳವಡಿಸಿಕೊಂಡು ಮಿಶ್ರಬೆಳೆಗೆ ಒತ್ತುಕೊಟ್ಟು ಬಾಳೆ ಸೇರಿದಂತೆ ತರಕಾರಿ ಬೆಳೆಯುತ್ತಿದೇನೆ. ಇಲಾಖೆಯ ಸಲಹೆ ಪಡೆದು ಕೃಷಿ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೈತರಿಗೆ ಸಾವಯವ ಪದ್ಧತಿಯಲ್ಲಿ ಬೆಳೆಯುವ ತರಕಾರಿ ಬೀಜಗಳನ್ನು ವಿತರಿಸಲಾಯಿತು. ಕ್ಯಾಡ್‌ಬರಿ ಕಂಪನಿ ಪ್ರತಿನಿಧಿ ಪ್ರದೀಪ್ ತೋಟಗಾರಿಕೆ ಬೆಳೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಭರತ್, ಪ್ರೇಮ್‌ಕುಮಾರ್, ಚನ್ನಾಪುರ ಗಿರೀಶ್, ಸುನೀಲ್, ಓಂಕಾರಮೂರ್ತಿ, ಶಿವಕುಮಾರ್, ಶ್ರೀನಿವಾಸ್ ಇತರರಿದ್ದರು.