

ಆನಂದಪುರ: ಸಾವಯವ ಗೊಬ್ಬರ ಬಳಸಿದರೆ ಸಸ್ಯಗಳಿಗೆ ಅಗತ್ಯ ಪೋಷಕಾಂಶಗಳು ದೊರೆತು ಬೆಳವಣಿಗೆ ಉತ್ತಮವಾಗಿರುತ್ತದೆ. ಅಧಿಕ ಇಳುವರಿ ಸಿಗುವ ಜತೆಗೆ ಸಸ್ಯಗಳು ರೋಗ ಮತ್ತು ಕೀಟಬಾಧೆ ತಡೆದುಕೊಳ್ಳುವ ಶಕ್ತಿ ಪಡೆಯುತ್ತವೆ ಎಂದು ಉಮಾಮಹೇಶ್ವರ ಸೇವಾ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಎನ್.ಶಾಸ್ತ್ರಿ ಹೇಳಿದರು.
ಹೊಸಗುಂದ ಶ್ರೀ ಉಮಾಮಹೇಶ್ವರ ದೇವಾಲಯ ಆವರಣದಲ್ಲಿರುವ ಶ್ರೀ ಭಾರತೀ ತೀರ್ಥ ಗೋಶಾಲೆಯಲ್ಲಿ ಭಾನುವಾರ ಸಾವಯವ ಗೊಬ್ಬರ ಜೀವಾಮೃತ ಉತ್ಪನ್ನ ಬಿಡುಗಡೆಗೊಳಿಸಿ ಮಾತನಾಡಿ, ನಾಟಿ ಹಸುವಿನ ಗೋಮೂತ್ರ, ಸಗಣಿ, ಕಡ್ಲೆಹಿಟ್ಟು, ಬೆಲ್ಲ ಮತ್ತು ಸಾವಯವ ಮಣ್ಣನ್ನು ಹದ ಪ್ರಮಾಣದಲ್ಲಿ ಮಿಶ್ರಣ ಮಾಡಿ ತಯಾರಿಸಿದ ಗೊಬ್ಬರ ಇದಾಗಿದೆ ಎಂದರು.
ಕಳೆದ 3 ವರ್ಷಗಳಿಂದ ನಮ್ಮ ಜಮೀನಿನಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸಿ ಯಶಸ್ಸು ಪಡೆಯಲಾಗಿದೆ. ಟ್ರಸ್ಟ್ನ ಕೆಲ ಸದಸ್ಯರ ಜಮೀನಿನಲ್ಲೂ ಇದರ ಪ್ರಯೋಗ ನಡೆಸಿ ಸಕಾರಾತ್ಮಕ ಫಲಿತಾಂಶ ಪಡೆಯಲಾಗಿದೆ. ಶುಂಠಿ, ಅನಾನಸ್, ಬಾಳೆ, ಅಡಕೆ, ತೆಂಗು ಕೃಷಿಗೆ ಇದು ಅತ್ಯಂತ ಪರಿಣಾಮಕಾರಿ ಮತ್ತು ಅಧಿಕ ಫಸಲಿಗೆ ಸಹಾಯಕ ಎಂದು ತಿಳಿಸಿದರು.
1, 2, 5 ಹಾಗೂ 10 ಲೀಟರ್ ಪ್ರಮಾಣದ ಪ್ಯಾಕೆಟ್ ಮಾರಾಟ ಮಾಡಲಾಗುವುದು. 5 ಮತ್ತು 10 ಲೀ. ಪ್ಯಾಕೆಟ್ ಖರೀದಿಸುವ ರೈತರಿಗೆ ರಿಯಾಯತಿ ನೀಡಲಾಗುವುದು. ಈ ಜೀವಾಮೃತ ಮಾರಾಟದಿಂದ ಬರುವ ಆದಾಯದಿಂದ ಗೋಶಾಲೆ ನಿರ್ವಹಿಸುವುದು ಟ್ರಸ್ಟ್ನ ಉದ್ದೇಶ ಎಂದರು. ಮಾಹಿತಿಗೆ ಮೊ. 9900416629, 9535754338 ಸಂಪರ್ಕಿಸಬಹುದು ಎಂದರು.
ಪ್ರಮುಖರಾದ ಜ್ಯೋತಿ ಕೋವಿ, ಹೆಡ್ತ್ರಿ ಬಸವರಾಜ್ ಗೌಡ, ರವಿಕುಮಾರ್, ತಾರಾಮೂರ್ತಿ, ಜಯಲಕ್ಷ್ಮೀ, ಕೆ.ಟಿ.ರಮೇಶ, ಗಣಪತಿ ಶೆಟ್ಟಿ, ಗಿರೀಶ ಗೌಡ, ವಿನಾಯಕ ಭಟ್ಟ, ಜಗದೀಶ ಇತರರಿದ್ದರು.