

ಕುಶಾಲನಗರ: ಕೃಷಿಕರು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಆರೋಗ್ಯ ವರ್ಧಕ ಆಹಾರ ಧಾನ್ಯಗಳನ್ನು ಬೆಳೆಯಲು ಮುಂದಾಗಬೇಕೆಂದು ಕೊಡಗು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಶಬಾನಾ.ಎಂ.ಶೇಖ್ ಸಲಹೆ ನೀಡಿದರು.
ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಹಾಗೂ ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆ ಜಂಟಿಯಾಗಿ ಶುಕ್ರವಾರ ಕುಶಾಲನಗರ ತಾಲೂಕಿನ ಹುಲುಸೆ ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾವಯವ ಕೃಷಿಯಿಂದ ಭೂಮಿಯ ಮಣ್ಣು ಹಾಗೂ ದೇಹದ ಆರೋಗ್ಯ ವೃದ್ಧ್ದಿಯಾಗುತ್ತದೆ. ರೈತರು ಸಂಘಟಿತರಾಗುವ ಮೂಲಕ ಕೃಷಿಯಲ್ಲಿ ನೂತನ ಆವಿಷ್ಕಾರಗಳನ್ನು ಕೈಗೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ವೀರೇಂದ್ರ ಕುಮಾರ್ ಮಾತನಾಡಿ, ಕೃಷಿಕರು ಸಮಗ್ರ ಕೃಷಿ ಪದ್ಧತಿಗೆ ಒತ್ತು ನೀಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದಾಗಿದೆ. ಮನೆಯಂಗಳದಲ್ಲಿಯೇ ಸಾವಯವ ಗೊಬ್ಬರವನ್ನು ತಯಾರಿಸಿಕೊಳ್ಳುವ ಮೂಲಕ ರಾಸಾಯನಿಕಗಳನ್ನು ಮಿತವಾಗಿ ಬಳಸಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ರೈತರಿಗೆ ಕರೆಕೊಟ್ಟರು.
ಸಕಲೇಶಪುರ ತಾಲೂಕಿನ ಎಡೆಹಳ್ಳಿಯ ಪ್ರಗತಿಪರ ಕೃಷಿಕ ವೈ.ಸಿ.ರುದ್ರಪ್ಪ, ಸಾಹಿತಿ ಕಣಿವೆ ಭಾರದ್ವಾಜ್ ಕೆ.ಆನಂದತೀರ್ಥ, ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಳ್ಳೇಕೆರೆ ಜಯಪ್ರಸಾದ್ ಮಾತನಾಡಿದರು. ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ಅಧಿಕಾರಿ ಡಾ.ಆರ್.ಕೆ.ಯಾದವ್ ಬಾಬು, ನಿವೃತ್ತ ಕೃಷಿ ಅಧಿಕಾರಿ ಎಚ್.ಎಸ್.ರಾಜಶೇಖರ್, ಮಂಡ್ಯ ಜಿಲ್ಲೆಯ ಶಿವಳ್ಳಿ ಗ್ರಾಮದ ಸಿದ್ಧ ಸಣ್ಣ ಭತ್ತದ ತಳಿಯ ಪೋಷಕ ಬೋರೇಗೌಡ, ಮೂದ್ರವಳ್ಳಿಯ ಕಾವೇರಿ ಮಾತಾ ಸಾವಯವ ಕೃಷಿ ಸಂಘದ ಅಧ್ಯಕ್ಷ ಎಂ.ಕೆ.ಮುತ್ತಪ್ಪ, ಹುಲುಸೆ ಗ್ರಾಮದ ಪ್ರಗತಿಪರ ಕೃಷಿಕರಾದ ಸದಾಶಿವ, ಎಚ್.ಸಿ.ಶಿವರುದ್ರಪ್ಪ, ಭೂಮಿ ಸುಸ್ಥಿರ ಸಂಸ್ಥೆಯ ಪುಟ್ಟಸ್ವಾಮಿ, ಲೋಕೇಶ್ ಮೊದಲಾದವರಿದ್ದರು.
ಇದೇ ಸಂದರ್ಭ ಕೃಷಿಕರು ಕೃಷಿ ಚಟುವಟಿಕೆಗಳಿಗೆ ಬಳಸುವ ನೇಗಿಲು, ನೊಗ, ಮರ, ಸೇರು, ಕೊಳಾಯಿ, ಬೀಸುವ ಕಲ್ಲು, ಅರೆಯುವ ಕಲ್ಲು ಮೊದಲಾದ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಹಾಗೆಯೇ ಹುಲುಸೆ ಗ್ರಾಮದ ಹೇಮಂತಕುಮಾರ್ ಎಂಬ ಕೃಷಿಕರು ಸಾಕಿರುವ ಎತ್ತುಗಳು ಗಮನ ಸೆಳೆದವು. ಕಾರ್ಯಕ್ರಮದ ಬಳಿಕ ದೇಸಿ ಭತ್ತದ ಅಕ್ಕಿಯಿಂದ ಸಿದ್ಧಪಡಿಸಿದ ಉಪಾಹಾರವನ್ನು ಗ್ರಾಮದ ಕೃಷಿಕ ಮಹಿಳೆಯರೇ ಬಡಿಸಿದ್ದು ವಿಶೇಷವಾಗಿತ್ತು.