ಸಾವಯವ ಕೃಷಿಗೆ ರೈತರನ್ನು ಪ್ರೇರೇಪಿಸಿ

22
Published on

ಮೈಸೂರು: ಕೃಷಿ ಇಲಾಖೆಯ ಅಧಿಕಾರಿಗಳು ಮಣ್ಣು ಮತ್ತು ಪರಿಸರ ರಕ್ಷಕರಾಗಬೇಕು. ಅನವಶ್ಯಕ ಹಾನಿಕಾರಕ ರಾಸಾಯನಿಕಗಳ ಬದಲಾಗಿ ಸಾವಯವ, ನೈಸರ್ಗಿಕ ಕೃಷಿ ವಿಧಾನಗಳ ಮೂಲಕ ಆರೋಗ್ಯವಾದ ಮಣ್ಣು, ಉತ್ತಮ ಪರಿಸರ ಸೃಷ್ಟಿಸಲು ರೈತರನ್ನು ಪ್ರೇರೇಪಿಸಬೇಕು ಎಂದು ಕೃಷಿ ಇಲಾಖೆಯ ನಿರ್ದೇಶಕಿ ನಂದಿನಿಕುಮಾರಿ ತಿಳಿಸಿದರು.


ಬೆಂಗಳೂರಿನ ಸಾವಯವ, ನೈಸರ್ಗಿಕ ಕೃಷಿ ಪ್ರಾದೇಶಿಕ ಕೇಂದ್ರದ ವತಿಯಿಂದ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ನೈಸರ್ಗಿಕ, ಸಾವಯವ ಕೃಷಿ ಕುರಿತ 30 ದಿನಗಳ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸ್ವಾತಂತ್ರೃ ನಂತರ ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಹಸಿವು ನೀಗಿಸಲು ಹಸಿರು ಕ್ರಾಂತಿಯ ತಂತ್ರಜ್ಞಾನಗಳ ಅಳವಡಿಕೆ ಅವಶ್ಯವಾಗಿತ್ತು. ಆದರೆ ಇಂದು ನಾವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದು, ಕೃಷಿಯಲ್ಲಿ ರಾಸಾಯನಿಕಗಳನ್ನು ಬಳಸಿ ಪರಿಸರ, ಮಣ್ಣು, ನೀರು ಮತ್ತು ಆಹಾರ ಕಲುಷಿತಗೊಂಡಿದೆ. ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಬರಡು ಜಮೀನು, ನೀರಿಲ್ಲದ ಮತ್ತು ಗಿಡಗಳಿಲ್ಲದ ಜಮೀನುಗಳನ್ನು ನೋಡುವ ಸಮಯ ದೂರವಿಲ್ಲ ಎಂದು ಹೇಳಿದರು.


ತರಬೇತಿ ಹಮ್ಮಿಕೊಂಡು ರಾಜ್ಯದ 30 ಮಾಸ್ಟರ್ ತರಬೇತಿದಾರರನ್ನು ಸಿದ್ಧ್ದಪಡಿಸಿದೆ. ಅಧಿಕಾರಿಗಳು ಮತ್ತು ವಿಜ್ಞಾನಿಗಳು ರೈತರಿಗೆ ಮಾರ್ಗದರ್ಶಕರಾಗಬೇಕು. ಈ ಮೂಲಕ ಸಾವಯವ, ನೈಸರ್ಗಿಕ ಕೃಷಿ ಪದ್ಧ್ದತಿ ಅಳವಡಿಸಿಕೊಂಡು ಬೇಸಾಯದ ಖರ್ಚು ಕಡಿಮೆ ಮಾಡಿಕೊಂಡು ಗುಣಮಟ್ಟದ ಆಹಾರ ಉತ್ಪಾದನೆ ಜತೆಗೆ ಪರಿಸರ ರಕ್ಷಕರಾಗಲು ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದರು.


ಸಾವಯವ ನೈಸರ್ಗಿಕ ಕೃಷಿ ಪ್ರಾದೇಶಿಕ ಕೇಂದ್ರದ ಅಧಿಕಾರಿ ಸ್ವಪ್ನಿಲ್ ಮಾಗರ್ ಮಾತನಾಡಿ, 30 ದಿನಗಳಲ್ಲಿ ವಿವಿಧ ಜಿಲ್ಲೆಗಳ 30 ಜನ ಅಧಿಕಾರಿಗಳು ಮಣ್ಣು ಮತ್ತು ನೀರು ಸಂರಕ್ಷಣೆ, ಮಣ್ಣಿನ ಆರೋಗ್ಯ ನಿರ್ವಹಣೆ, ಪೋಷಕಾಂಶ, ಕಳೆ, ತೇವಾಂಶ ನಿರ್ವಹಣೆ, ಜೈವಿಕ ವಿಧಾನದಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ, ಸಾವಯವ ಪ್ರಮಾಣಿಕರಣ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಗಿದೆ. ಅಧಿಕಾರಿಗಳು ಕ್ಷೇತ್ರಮಟ್ಟದಲ್ಲಿ ಕಾರ್ಯಪ್ರವೃತ್ತರಾಗಿ ರೈತರನ್ನು ಪ್ರೇರೇಪಿಸುವ ಮೂಲಕ ಸಾವಯವ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಕೆ ಪ್ರದೇಶವನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.


ಮೈಸೂರು ಜಂಟಿ ಕೃಷಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್, ಉಪ ಕೃಷಿ ನಿರ್ದೇಶಕರಾದ ಕೆ.ರಾಜು ಮತ್ತು ಬಿ.ಧನಂಜಯ, ಹಿರಿಯ ಕ್ಷೇತ್ರ ಅಧೀಕ್ಷರಾದ ಡಾ.ಪಿ.ಪ್ರಕಾಶ್, ವಿಸ್ತರಣಾ ಮುಂದಾಳು ಡಾ.ರಾಮಚಂದ್ರ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರಾದ ಜಿ.ಎಚ್.ಯೋಗೇಶ್, ಸಹಾಯಕ ಕೃಷಿ ನಿರ್ದೇಶಕಿ ಎಸ್.ಬಿ. ಮಮತಾ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net