

ಬೀದರ್: ರೈತರು ರಾಸಾಯನಿಕ ಕೃಷಿ ಪದ್ಧತಿಯಿಂದ ದೂರ ಸರಿದು ಸಾವಯವ ಕೃಷಿಗೆ ಆದ್ಯತೆ ನೀಡುವ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬೇಕು ಎಂದು ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ಸಲಹೆ ನೀಡಿದರು.
ಆಣದೂರ ಗ್ರಾಮದ ಭವಾನಿ ಮಂದಿರದಲ್ಲಿ ಅನ್ನದಾತ ಸ್ವಸಹಾಯ ಸಂಘ ಏರ್ಪಡಿಸಿದ್ದ ಸಾವಯವ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಸಾವಯವ ಕೃಷಿ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ. ಭೂಮಿಯನ್ನು ದೈವ ಸ್ವರೂಪಿ ಎಂದು ಪೂಜಿಸುವ ರೈತರು ಸಂಶೋಧನಾಶೀಲರಾಗಿರಬೇಕು ಎಂದರು.
ನೈಸರ್ಗಿಕವಾಗಿ ಸಿಗುವ ಉತ್ಪನ್ನಗಳಿಂದ ರೈತರು ಗೊಬ್ಬರ, ಔಷಧ ಸಿದ್ಧಪಡಿಸಿಕೊಂಡು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಸಿಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆಯೂ ಉಳಿಯುತ್ತದೆ ಎಂದು ತಿಳಿಸಿದರು.
ಉದ್ಘಾಟಿಸಿದ ಕೃಷಿ ಚಿಂತಕ ಬಿ.ಎಸ್. ಕುದರೆ ಮಾತನಾಡಿ, ಸ್ವ ಸಹಾಯ ಸಂಘಗಳು ಕೃಷಿ ಕ್ಷೇತ್ರಕ್ಕೂ ಆದ್ಯತೆ ನೀಡಬೇಕು. ಸಾವಯವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಚಾರ ಮಾಡಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸುನೀಲಕುಮಾರ ಎನ್.ಎಂ. ಮಾತನಾಡಿ, ಕೃಷಿಯಲ್ಲಿ ಉಳಿದ ತ್ಯಾಜ್ಯ ವಸ್ತುಗಳನ್ನು ಸುಡದೆ ಮರು ಬಳಕೆ ಮಾಡುವುದು ಸಾವಯವದ ಭಾಗವಾಗಿದೆ ಎಂದು ತಿಳಿಹೇಳಿದರು.
ಅನ್ನದಾತ ಸ್ವಸಹಾಯ ಸಂಘದ ಅಧ್ಯಕ್ಷ ವಸಂತರಡ್ಡಿ ತಿಪ್ಪಾರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಶ್ರೀನಿವಾಸರಡ್ಡಿ, ಪ್ರಮುಖರಾದ ಮಹಾದೇವಪ್ಪ ನಾಗೂರೆ, ವೀರಂತಯ್ಯ ಹಿರೇಮಠ, ಮಾಣಿಕರಡ್ಡಿ, ಖಾಸೀಂ ಅಲಿ, ಸಂಘದ ಸದಸ್ಯರಾದ ಗುಣವಂತ ಅತಿವಾಳೆ, ರಾಜಕುಮಾರ ತಡಗುರೆ, ಶಿವಶಂಕರ ಕಾಡವಾದೆ, ಭಗವಂತರಡ್ಡಿ, ಗಣಪತಿ ಮಡಿವಾಳ, ಲಕ್ಷ್ಮೀಕಾಂತ ಕುಲಕರ್ಣಿ, ಚನ್ನಪಯ್ಯ ಕೋಟೆ ಇತರರಿದ್ದರು. ಶಿವಕುಮಾರ ಹಿರೇಮಠ ಸ್ವಾಗತಿಸಿದರು. ಬಸವರಾಜ ಬಶೆಟ್ಟಿ ನಿರೂಪಣೆ ಮಾಡಿದರು. ಪ್ರಭುಶೆಟ್ಟಿ ಪಸರಗಿ ವಂದಿಸಿದರು.