ಸಾವಯವ ಕೃಷಿಗೆ ಆದ್ಯತೆ ಅಗತ್ಯ

CTD ---0001
Published on

ಚಿತ್ರದುರ್ಗ: ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದರು.
ಶರಣ ಸಂಸ್ಕೃತಿ ಉತ್ಸವ, ಶ್ರೀ ಜಯದೇವ ಶ್ರೀ 150 ನೇ ಜಯಂತ್ಯುತ್ಸವ ಅಂಗವಾಗಿ ಸೋಮವಾರ ಮುರುಘಾ ಮಠದ ಆವರಣದಲ್ಲಿ ಏರ್ಪಡಿಸಿದ್ದ ಕೃಷಿ, ಕೈಗಾರಿಕೆ ವಸ್ತು ಪ್ರದರ್ಶನ ಮತ್ತು ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದರು.
1960 ರ ಮೊದಲು ಸಾವಯವ ಕೃಷಿಯೇ ಪ್ರಧಾನವಾಗಿತ್ತು. ಆಹಾರ ಕೊರತೆ ನೀಗಿಸಲು ರಸಗೊಬ್ಬರಗಳ ಬಳಕೆ ಆರಂಭವಾಯಿತು. ಹಿಂದೆಲ್ಲ ಕೃಷಿಕರ ಮನೆಗಳಲ್ಲಿರುತ್ತಿದ್ದ ಹತ್ತಾರು-ನೂರಾರು ಜಾನುವಾರುಗಳು ಗೊಬ್ಬರದ ಬೇಡಿಕೆ ಪೂರೈಸುತ್ತಿದ್ದವು. ಒಟ್ಟು ಕುಟುಂಬ ಕೃಷಿಯಲ್ಲಿ ಇರುತ್ತಿತ್ತು ಎಂದರು.
ತಮ್ಮ ಕ್ಷೇತ್ರದಲ್ಲಿ 23 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿದ ಮಾಹಿತಿ ಹಂಚಿಕೊಂಡ ಸಚಿವರು, ಚಿತ್ರದುರ್ಗದಲ್ಲಿ ಜಯದೇವ ಹೃದ್ರೋಗಾಲಯ ಆರಂಭಿಸುವ ಕುರಿತು ಸಿಎಂ ಬಳಿ ಚರ್ಚಿಸುತ್ತೇನೆ. ಚಿತ್ರದುರ್ಗದಲ್ಲಿ ಜಯದೇವ ಶ್ರೀ ಪ್ರಾರ್ಥನಾ ಮಂದಿರದ ನಿರ್ಮಾಣಕ್ಕಾಗಿ 5 ಕೋಟಿ ರೂ.ಅನುದಾನ ಮಂಜೂರಾತಿಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ತುಮಕೂರು ಶ್ರೀ ಸಿದ್ಧಗಂಗಾ ಕ್ಷೇತ್ರದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ರೈತರು-ಸೈನಿಕರು ನಮ್ಮ ರಕ್ಷಕರು. ಕೃಷಿ ಕಾಯಕ ಅತ್ಯಂತ ಪವಿತ್ರ. ಮಕ್ಕಳಾರೂ ರೈತರಾಗಲು ಮುಂದೆ ಬಾರದ ಸ್ಥಿತಿ ಇದೆ. ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ನೀರು ಹಾಗೂ ಆಹಾರ ಒದಗಿಸಲು ಸಾವಯವ ಕೃಷಿ ಅನಿವಾರ‌್ಯ. ಪ್ರಧಾನಿ ನರೇಂದ್ರ ಮೋದಿ ಅವರು ಸಿರಿಧಾನ್ಯಕ್ಕೆ ಒತ್ತು ನೀಡಿದ್ದಾರೆ. ಎಲ್ಲ ಬೆಳೆಗಳಿಗೂ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಹೇಳಿದರು.
ಜಯದೇವ ಶ್ರೀಗಳ ದೂರದೃಷ್ಟಿ ಅಪಾರವಾದುದು. ಶ್ರೀಮಠ ಆಚರಿಸುತ್ತಿದ್ದ ದಸರಾ ದರ್ಬಾರ್, ಮುರುಘಾ ಶರಣರು ಪೀಠಕ್ಕೆ ಏರಿದ ಬಳಿಕ ಶರಣ ಸಂಸ್ಕೃತಿ ಉತ್ಸವ ಎಂದಾಯಿತು. ಅವರು ಈ ಸಂದರ್ಭದಲ್ಲಿ ಇಲ್ಲಿರಬೇಕಿತ್ತು ಎಂದು ಶ್ರೀಗಳು ಹೇಳಿದರು.
ಕೃಷಿ ಸಮಸ್ಯೆ ಮತ್ತು ಪರಿಹಾರೋಪಾಯಗಳ ಕುರಿತು ಮಾತನಾಡಿದ ರಾಜ್ಯರೈತ ಸಂಘದ ಕಾರ‌್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ನಾ ವಿಂದು ವಿಷ ಉಣ್ಣುತ್ತಿದ್ದೇವೆ. ನಮ್ಮ ಕಾಲ ಮುಗಿಯುತ್ತ ಬಂದಿದೆ, ಆದರೆ ಮುಂದಿನ ಪೀಳಿಗೆ ಏನು ಪಾಪ ಮಾಡಿದೆ? ಶುದ್ಧ ಆಹಾರ ಉತ್ಪಾದನೆಗೆ ಸಾವಯವ ಕೃಷಿ ಅನಿವಾರ‌್ಯ. ಸ್ವಾಮಿನಾಥನ್, ಕರ್ನಾಟಕ ಕೃಷಿ ಆಯೋಗದ ಶಿಫಾರಸು ಜಾರಿಗೆ ಬರಬೇಕು. ಸಾಲದ ಹೊರೆ ಯಿಂದ ರೈತರನ್ನು ಮುಕ್ತಿಗೊಳಿಸಬೇಕು. ಜಿಲ್ಲೆಯ ಎಲ್ಲ ಭಾಗಕ್ಕೂ ತಾರತಮ್ಯವಿಲ್ಲದೆ ನೀರಾವರಿ ಒದಗಿಸಬೇಕು, ವೇದಾವತಿ ನದಿ ಪುನಶ್ಚೇತನಗೊಳಿಸಬೇಕೆಂದರು.
ರೈತ ಮುಖಂಡ ತೇಜಸ್ವಿ ವಿ.ಪಟೇಲ್ ಮಾತನಾಡಿ, ರೈತರಿಗೆ ವಿಷಜಂತುಗಳ ಭಯವಿಲ್ಲ. ಆದರೆ ಅವರು ಮಾರುಕಟ್ಟೆಗೆ ಹೆದರುವಂತಾಗಿದೆ. ಬೆಂಬಲ ಬೆಲೆಗಿಂತ ನಮಗೆ ಬೆಳೆಗೆ ವಾಸ್ತವ ಬೆಲೆ ಸಿಗಬೇಕು. ಕೃಷಿಕರಿಗೆ ಕೊಟ್ಟ ಎಲ್ಲ ಸೌಲಭ್ಯಗಳು ಬ್ಯಾಂಕ್ ಸಾಲದ ಬಡ್ಡಿಗೆ ಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಾಲೆಗಳಲ್ಲಿ ಬಿಸಿಯೂಟ ಹಾಗೂ ಮಠಮಾನ್ಯಗಳ ದಾಸೋಹಕ್ಕೆ ಸಿರಿಧಾನ್ಯ ಬಳಸುವಂತಾಗಬೇಕೆಂದು ಸಲಹೆ ನೀಡಿದರು. ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ ಶ್ರೀ ಶಿವಯೋಗಿ ಕಳಸದ ಮಾತನಾಡಿ, ರಾಜ್ಯದಲ್ಲಿ ಸಾವಯವ ಕೃಷಿಗೆ ತೊಂದರೆ ಇಲ್ಲ. ಕೃಷಿ ಪದವೀಧರರು ತಮ್ಮೂರಿಗೆ ಮರಳಿ ವೈಜ್ಞಾನಿಕ ಕೃಷಿ ಬೆಂಬಲಿಸಬೇಕಿದೆ ಎಂದರು.
ಪ್ರಗತಿಪರ ರೈತರಾದ ಸಿದ್ಧರಾಮಪ್ಪ, ವೈ.ಎನ್.ಸಂತೋಷಕುಮಾರ್, ಪಿ.ಭಾಗ್ಯಮ್ಮ, ಟಿ.ರವಿಕುಮಾರ ಅವರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಡಾ.ಶ್ರೀ ಬಸವಕುಮಾರ ಸ್ವಾಮೀಜಿ, ಭದ್ರಾ ಮೇಲ್ದಂಡೆ ಯೋಜನೆ ಸಿಇ ಎಫ್.ಎಚ್.ಲಮಾಣಿ, ನಿವೃತ್ತ ಐಎಎಸ್ ಅಧಿಕಾರಿ ಅಶೋಕ್ ದಳವಾಯಿ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಯೋಗೇಶ್‌ಬಾಬು, ಕುಡಾ ಅಧ್ಯಕ್ಷ ಎಂ. ಕೆ.ತಾಜ್‌ಪೀರ್, ಸಾಹಿತಿ ಎಸ್.ಆರ್.ಗುಂಜಾಳ್ ಮತ್ತಿತರರು ಇದ್ದರು.
ಜಿಲ್ಲಾ ಶರಣ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಸ್ವಾಗತಿಸಿದರು. ನವೀನ್ ಮಸ್ಕಲ್ ನಿರೂಪಿಸಿದರು. ಎಸ್‌ಜೆಎಂ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಹಾಗೂ ನಾಟ್ಯರಂಜಿನಿ ನೃತ್ಯ ಕಲಾ ಕೇಂದ್ರ ದ ಕಲಾವಿದರು ಸಾಂಸ್ಕೃತಿಕ ಕಾರ‌್ಯಕ್ರಮ ನಡೆಸಿಕೊಟ್ಟರು. ವಸ್ತು ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ(ಪ್ರ), ಕೃಷಿ ಇಲಾಖೆ(ದ್ವಿ) ಹಾಗೂ ಭದ್ರಾ ಮೇಲ್ದಂಡೆ ಯೋಜನೆಯ ಮಾದರಿಗೆ ಜಲಸಂಪನ್ಮೂಲ ಇಲಾಖೆ ತೃತೀಯ ಸ್ಥಾನ ಗಳಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net