ಸಾವಯವ ಕೃಷಿ ಮಾರುಕಟ್ಟೆ ಪರಿಶೀಲನೆ, ತರಕಾರಿಗೆ ಬೆಳೆಯಲು ರಸಾಯನಿಕ ಬಳಕೆ ಆರೋಪ, ಸಮಸ್ಯೆ ಇಲ್ಲ ಎಂದ ಅಧಿಕಾರಿಗಳ ತಂಡ

05 Nela Ph 02 Officer Visit
Published on

ನೆಲಮಂಗಲ: ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿಯಲ್ಲಿ ಶಿವಗಂಗಾ ಸಾವಯವ ತರಕಾರಿ ಬೆಳೆಗಾರರ ಸಂಘ ನಡೆಸುತ್ತಿದ್ದ ಸಾವಯವ ಕೃಷಿ ಮಾರುಕಟ್ಟೆಗೆ ಕೃಷಿ ಇಲಾಖೆ ಅಧಿಕಾರಿಗಳು ಸೋಮವಾರ ಭೇಟಿ ಪರಿಶೀಲನೆ ನಡೆಸಿದರು.

ಮೊದಲಿಗೆ ಬೆಳೆಗಾರರ ಸಂಘ ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಅಧಿಕೃತ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡ ಪ್ರಮಾಣಪತ್ರದ ಬಗ್ಗೆ ಪರಿಶೀಲಿಸಿದರು. ಸಂಘದ ಎಲ್ಲ್ಲ ಸದಸ್ಯರು ಪಿಜಿಎಸ್-ಇಂಡಿಯಾ ನ್ಯಾಷನಲ್ ಸ್ಟಾಂಡರ್ಡ್ ಫಾರ್ ಆರ್ಗ್ಯಾನಿಕ್ ಪ್ರೊಡಕ್ಷನ್ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದುಕೊಂಡಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡರು.

ತಾಲೂಕಿನಾದ್ಯಂತ ನೂರಾರು ಮಂದಿ ರೈತರಿಗೆ ಬೆಳೆಗಾರರ ಸಂಘದಲ್ಲಿ ಸದಸ್ಯತ್ವ ನೀಡಿರುವ ಶಿವಗಂಗಾ ಸಾವಯವ ಹಣ್ಣು ಮತ್ತು ತರಕಾರಿ ಮಾರಾಟ ಸಂಘ, ಸಾವಯವ ಕೃಷಿ ಉತ್ಪನ್ನಗಳ ಹೆಸರಿನಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಔಷಧ ಬಳಕೆ ಮಾಡಿ ಬೆಳೆದಿರುವ ತರಕಾರಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಾಸಗಿ ವ್ಯಕ್ತಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಘವೇಂದ್ರ ತಿಳಿಸಿದರು.

ಸದ್ಯ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಅದಾಗ್ಯೂ ಅನುಮಾನವಿದ್ದಲ್ಲಿ ತರಕಾರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಖಾತ್ರಿಪಡಿಸಿಕೊಳ್ಳಬಹುದು. ಅಧಿಕೃತ ಸಂಸ್ಥೆಯಿಂದ ದೃಢೀಕರಣ ಪತ್ರ ಪಡೆದು ರೈತರು ಸಾವಯವ ಕೃಷಿ ಉತ್ಪನ್ನ ಮಾರಾಟ ಮಾಡಬಹುದಾಗಿದೆ ಎಂದರು.

650ಕ್ಕೂ ಹೆಚ್ಚು ರೈತರು ಸಂಘದಲ್ಲಿ ನೋಂದಣಿಯಾಗಿದ್ದಾರೆ. ರೈತರು ಹಾಗೂ ಗ್ರಾಹಕರ ಹಿತಾಸಕ್ತಿಯಿಂದ 22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ 3 ತಿಂಗಳಿಗೊಮ್ಮ ರೈತರನ್ನು ಸಭೆ ಕರೆದು ಅಗತ್ಯ ಸಾವಯವ ಕುರಿತು ಮಾಹಿತಿ ನೀಡುವ ಜತೆಗೆ ರೈತರ ಜಮೀನಿಗೆ ಭೇಟಿ ನೀಡಿ ಸಾವಯವ ಬೆಳೆ ಕುರಿತ ಮಾರ್ಗದರ್ಶನ ನೀಡಿ, ಬಿತ್ತನೆ ಬೀಜ, ಸಸಿ ಪೂರೈಕೆ ಮಾಡಲಾಗುತ್ತಿದೆ ಎಂದು ಶಿವಗಂಗಾ ಸಾವಯವ ತರಕಾರಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಹನುಮಂತರಾಜು ತಿಳಿಸಿದರು.

ಬೇಡಿಕೆಗೆ ತಕ್ಕಂತೆ ತರಕಾರಿಗಳನ್ನು ರೈತರಿಂದ ಪಡೆದು ಮಾರುಕಟ್ಟೆಯ ಸಗಟು ದರಕ್ಕಿಂತ ಶೇ.25 ಅಧಿಕ ಬೆಲೆಯನ್ನು ಸಾವಯವ ತರಕಾರಿಗೆ ನೀಡಲಾಗುತ್ತಿದೆ. ರಾಸಾಯನಿಕ ಗೊಬ್ಬರ ಔಷಧ ಮಿಶ್ರಿತ ತರಕಾರಿಯನ್ನು ಪೂರೈಕೆ ಮಾಡುತ್ತಿದ್ದ ಸುಮಾರು ನಾಲ್ಕೈದು ಮಂದಿ ರೈತರನ್ನು ಸಂಘದಿಂದ ಕೈಬಿಡಲಾಗಿದೆ. ದೂರುದಾರರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net