ಸಾವಯವ ಕೃಷಿ ಭೂಮಿಗೆ ವಿಜ್ಞಾನಿಗಳ ತಂಡ ಭೇಟಿ

mysore
Published on

ಮೈಸೂರು: ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಅಂಗವಾಗಿ ಜೆಎಸ್‌ಎಸ್ ಕೆವಿಕೆಯಿಂದ ಸಾವಯವ ಬೇಸಾಯ ತರಬೇತಿ ಪಡೆದ ಕೆಂಪೇಗೌಡನ ಹುಂಡಿಯ ಪರಶಿವಮೂರ್ತಿ ಅವರ ಕೃಷಿ ಭೂಮಿಗೆ ವಿಜ್ಞಾನಿಗಳ ತಂಡ ಭೇಟಿ ಶುಕ್ರವಾರ ನೀಡಿತ್ತು.

ಎರೆಗೊಬ್ಬರ ತಯಾರು ಮಾಡಿ ಬಾಳೆ, ಅಡಕೆ ಮತ್ತು ತೆಂಗು ಬೆಳೆ ಬೆಳೆಯುತ್ತಿದ್ದು, ಈ ಸಂದರ್ಭದಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಹಂತ ಹಂತವಾಗಿ ಅಳವಡಿಸಿಕೊಳ್ಳಲು ತಿಳಿಸಲಾಯಿತು.

ವರಕೋಡು ಗ್ರಾಮದ ಕೃಷ್ಣೇಗೌಡರ ಸಮಗ್ರ ಕೃಷಿ ಪ್ರದೇಶಕ್ಕೆ ಭೇಟಿ ನೀಡಿ, ಪಶು ಸಂಗೋಪನೆಯ ಉಪಕಸುಬುಗಳಾದ ಕೋಳಿ, ಕುರಿ ಸಾಕಣೆಯನ್ನು ಸಹ ವಿವಿಧ ಬೆಳೆಗಳ ಬೇಸಾಯದ ಜತೆಗೆ ಸಾಕಲು ಸೂಚಿಸಲಾಯಿತು.

ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಬೇಸಾಯ ಶಾಸ್ತ್ರದ ವಿಷಯ ತಜ್ಞ ಶಾಮರಾಜ ಅವರು ದ್ವಿದಳ ಧಾನ್ಯಗಳಲ್ಲಿ ಸುಧಾರಿತ ಬೇಸಾಯ ಕ್ರಮಗಳು, ಮಣ್ಣಿನ ಆರೋಗ್ಯ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಮಳೆ ನೀರಿನ ಕೊಯ್ಲು, ಮಳೆ ಆಶ್ರಯದಲ್ಲಿ ಬೆಳೆ ಹಾಗೂ ಬೆಳೆ ಪದ್ಧತಿಗಳ ಕುರಿತು ತಾಂತ್ರಿಕ ಮಾಹಿತಿ ನೀಡಿದರು.

ಕೃಷಿ ಇಲಾಖೆ ಅಧಿಕಾರಿ ವಿರೂಪಾಕ್ಷ ಅವರು, ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳು ಹಾಗೂ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಕಾರ್ಯನಿರ್ವಹಿಸುವ ತಾಲೂಕು ತಾಂತ್ರಿಕ ನಿರ್ವಾಹಕರು ಆತ್ಮ ಯೋಜನೆಯ ಕುರಿತು ರೈತರಿಗೆ ಮಾಹಿತಿ ನೀಡಿದರು.

ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಡಾ.ಸುಜಾತಾ ನಾಯರ್, ಡಾ.ಅನುರಾಧಾ ಸಾನೆ ಅವರು ತೋಟಗಾರಿಕೆ ಹಣ್ಣಿನ ಬೆಳೆ, ಮಾವು ತಳಿಗಳ ಹಾಗೂ ಮಾವಿನ ತೋಟ ನಿರ್ವಹಣೆ, ಹೂವಿನ ಬೆಳೆ ಬೇಸಾಯ ಕುರಿತು ಮಾಹಿತಿ ನೀಡಿದರು. ಸುಮಾರು 418ಕ್ಕೂ ಹೆಚ್ಚು ರೈತರು ಪಾಲ್ಗೊಂಡು ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net