

ತಾಳಗುಪ್ಪ: ಸಹಜ ಪದ್ಧತಿಯಾದ ಸಾವಯವ ವಿಧಾನದಿಂದ ಬೆಳೆದ ಆಹಾರ ಪದಾರ್ಥಗಳನ್ನು ಬಳಸುವುದರಿಂದ ಕ್ಯಾನ್ಸರ್ ಹಾಗೂ ಇನ್ನಿತರ ರೋಗಗಳನ್ನು ತಡೆಗಟ್ಟಬಹುದು ಎಂದು ತಲವಾಟ ಗ್ರಾಪಂ ಅಧ್ಯಕ್ಷ ಡಿ.ಎನ್. ಪ್ರಸನ್ನ ಹೇಳಿದರು.
ಸಾಗರ ತಾಲೂಕಿನ ತಲವಾಟ ಗ್ರಾಪಂನಲ್ಲಿ ಎಂಐಒ ತೀರ್ಥಹಳ್ಳಿ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ಹಾಗೂ ಕ್ಯಾನ್ಸರ್ ಕುರಿತು ಜನ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಸಾವಯವ ಗೊಬ್ಬರದಿಂದ ಬೆಳೆದ ಬೆಳೆಗಳನ್ನು ಉಪಯೋಗಿಸುವುದರಿಂದ ಯಾವುದೇ ತರಹದ ಕಾಯಿಲೆಗಳು ಬರುವುದಿಲ್ಲ. ಇಂದು ನಾವು ಹೆಚ್ಚಿನ ಇಳುವರಿಗಾಗಿ ವಿಷಯುಕ್ತ ಗೊಬ್ಬರಗಳನ್ನು ಬಳಸುತ್ತಿದ್ದೇವೆ. ಇದರಿಂದ ಬೆಳೆಗಳು ವಿಷಪೂರಿತವಾಗಿ ಹಲವು ಕಾಯಿಲೆಗಳು ಬರುತ್ತಿವೆ ಎಂದರು.
ಡಾ. ಶಿಲ್ಪಾ ಮಾತನಾಡಿ, ಕ್ಯಾನ್ಸರ್ ಎಂಬುದು ದೊಡ್ಡ ಕಾಯಿಲೆ ಅಲ್ಲ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದರ ಮೂಲಕ ಗುಣಮುಖ ಹೊಂದಬಹುದು ಎಂದು ತಿಳಿಸಿದರು.
ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ ಕುರಿತು ಸಾಗರದ ಮಹಿಳಾ ಮತ್ತು ಮಕ್ಕಳ ಶಿಕ್ಷಣಾಕಾರಿ ಶಾರದಾ ಮತ್ತು ಕ್ಷೇತ್ರ ಶಿಕ್ಷಣ ಸಂಪನ್ಮೂಲ ವಿಭಾಗದ ಗಜಾನನ ಮಾಹಿತಿ ನೀಡಿದರು. ಎಂಐಒ ಕ್ಯಾನ್ಸರ್ ಜನ ಜಾಗೃತಿ ಅಭಿಯಾನದ ಸಂಯೋಜಕ ಅ.ನಾ.ವಿಜಯೇಂದ್ರ ರಾವ್ ಕ್ಯಾನ್ಸರ್ ಲಕ್ಷಣಗಳ ಕುರಿತು ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪಿಡಿಒ ಗುಲಾಬ್ ಷಾ, ದೇವಕಿ, ಸದಸ್ಯರಾದ ಟಿ.ಎಸ್.ಕಲ್ಪನಾ, ಆರ್.ಗಣೇಶ್, ಎಂ.ಆರ್.ಕನ್ನಪ್ಪ ಇತರರಿದ್ದರು.