

ಕೊಪ್ಪಳ:ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮುದಾಯದವರಿಗೆ ಪ್ರತ್ಯೇಕ ನಿಗಮ, ಮಂಡಳಿ ರಚಿಸುವಂತೆ ಒತ್ತಾಯಿಸಿ ಭಾಗ್ಯನಗರ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ ಟ್ರಸ್ಟ್ ಪದಾಧಿಕಾರಿಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ನಮ್ಮ ಸಮುದಾಯದ 16 ಲಕ್ಷ ಜನರಿದ್ದು, ಶೇ.85ರಷ್ಟು ಬಡವರಿದ್ದೇವೆ. ಸೋಡಾ, ತಂಪು ಪಾನೀಯ, ಗ್ಯಾರೇಜ್, ಬೀದಿ ಬದಿ ವ್ಯಾಪಾರ, ಟೈಲರಿಂಗ್, ವಾಚ್ ರಿಪೇರಿ ಸೇರಿ ಇತರ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದೇವೆಂದು ತಿಳಿಸಿದರು.
ಸಮುದಾಯಕ್ಕೆ ಪ್ರತ್ಯೇಕ ನಿಗಮ, ಮಂಡಳಿ ರಚಿಸಬೇಕು. ಅನುದಾನ ನೀಡಿ ಅಭಿವೃದ್ಧಿ ಯೋಜನೆ ರೂಪಿಸಬೇಕು. ಸಮುದಾಯ ಹೆಚ್ಚಿರುವ ಗ್ರಾಮಗಳಲ್ಲಿ ಸಹಸ್ರಾರ್ಜುನ ಹೆಸರಿನ ವೃತ್ತ ನಿರ್ಮಿಸಬೇಕು. ಸರ್ಕಾರದಿಂದ ಸಹಸ್ರಾರ್ಜುನ ಜಯಂತಿ ಆಚರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಮುದಾಯ ಮುಖಂಡರಾದ ನಾಗರಾಜ ಪವಾರ್, ಎಚ್.ಕೆ.ನಿರಂಜನ, ಸುನಿಲ್ ಮೇಘರಾಜ, ಪರಶುರಾಮ್ ಪವಾರ್, ಸರೋಜಾ ಬಾಕಳೆ, ಲಕ್ಷ್ಮಣ ಸಾ ನಿರಂಜನ್, ಮೋಹನ್ ಪವಾರ್, ಶಂಕರ್ ಪವಾರ್ ಇತರರಿದ್ದರು.