ಸಾಲು ಸಾಲು ರಜೆ: ಜೋಗ ಜಲಪಾತ ನೋಡಲು ಪ್ರವಾಸಿಗರ ಲಗ್ಗೆ

JOG WEB
Published on

ಕಾರ್ಗಲ್: ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭಾನುವಾರ ಭೇಟಿ ನೀಡಿದ್ದರು. ಕಣಿವೆಯ ಆಳದಲ್ಲಿ ನಾಲ್ಕು ಕವಲುಗಳಾಗಿ ಸುರಿಯುತ್ತಿರುವ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಂಡರು.

ಸಾಕಷ್ಟು ಹೊತ್ತು ಮಂಜು ಆವರಿಸಿಕೊಳ್ಳುತ್ತಿದ್ದ ಜಲಪಾತ ಸ್ಪಷ್ಟವಾಗಿ ಗೋಚರಿಸಲು ಪ್ರವಾಸಿಗರು ಗಂಟೆಗಟ್ಟಲೇ ಕಾಯಬೇಕಿತ್ತು. ಆದರೆ ಭಾನುವಾರ ಮಾತ್ರ ಜಲಪಾತ ಹಾಲ್ನೊರೆಯಂತೆ ಸ್ಪಷ್ಟವಾಗಿ ಕಾಣುತ್ತ ಪ್ರವಾಸಿಗರನ್ನು ಸೆಳೆಯುತ್ತಿತ್ತು. ಇದಕ್ಕೆ ಪೂರಕವಾಗಿ ಶರಾವತಿ ಕಣಿವೆ ವ್ಯಾಪ್ತಿಯಲ್ಲಿ ಮಳೆಯೂ ಒಂದಿಷ್ಟೂ ಬಿಡುವು ನೀಡಿತ್ತು. ಸೋಮವಾರವೂ ಪ್ರವಾಸಿಗರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಮುಖ್ಯದ್ವಾರದ ಹೊರಭಾಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ವಾಹನ ಸಂಚಾರವನ್ನು ಸುಗಮಗೊಳಿಸಲು ಜೋಗ ಪೊಲೀಸ್ ಠಾಣೆಯ ಪಿಎಸ್‌ಐ ನಿರ್ಮಲಾ ಮತ್ತು ಸಿಬ್ಬಂದಿ ಹರಸಾಹಸಪಟ್ಟರು. ಶರಾವತಿ ಕಣಿವೆ ವ್ಯಾಪ್ತಿಯಲ್ಲಿನ ಸರ್ಕಾರಿ ಹಾಗೂ ಖಾಸಗಿ ವಸತಿ ಗೃಹಗಳು ಭರ್ತಿಯಾಗಿದ್ದವು. ಸಾಕಷ್ಟು ಪ್ರವಾಸಿಗರಿಗೆ ಲಾಡ್ಜ್‌ಗಳು ಸಿಗದೆ ತಾಲೂಕು ಕೇಂದ್ರಕ್ಕೆ ಮುಖ ಮಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net