

- ಪಿ.ಬಿ.ಹರೀಶ್ ರೈ ಮಂಗಳೂರು
ಬೆಳೆ ಸಾಲಮನ್ನಾ ಯೋಜನೆಯ ಪ್ರಕ್ರಿಯೆ 2019ರ ಜುಲೈಗೆ ಪೂರ್ಣಗೊಂಡು ಅರ್ಹ ರೈತರ ಖಾತೆಗೆ ಹಣ ಜಮೆಯಾಗಬೇಕಿತ್ತು. ಆದರೆ ತಾಂತ್ರಿಕ ಅಡಚಣೆ ಪರಿಣಾಮ, ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಅವಿಭಜಿತ ದ.ಕ.ಜಿಲ್ಲೆಯ 14,497 ರೈತರಿಗೆ 145.54 ಕೋಟಿ ರೂ.ಬಾಕಿಯಾಗಿದೆ. ರೈತರು ಸಹಕಾರಿ ಬ್ಯಾಂಕ್‌ಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು 2018ರ ಜುಲೈಗೆ ಹೊಂದಿರುವ ಹೊರಬಾಕಿಯಲ್ಲಿ ಗರಿಷ್ಠ 1 ಲಕ್ಷ ರೂ. ಸಾಲಮನ್ನಾವನ್ನು ಹಿಂದಿನ ಮೈತ್ರಿ ಸರ್ಕಾರ ಘೋಷಿಸಿತ್ತು. ದ.ಕ.ಮತ್ತು ಉಡುಪಿಯ 91,750 ರೈತರು ಈ ಸಾಲಮನ್ನಾಕ್ಕೆ ಅರ್ಹತೆ ಹೊಂದಿದ್ದು, 705.10 ಕೋಟಿ ರೂ.ಬಿಡುಗಡೆಯಾಗಬೇಕಿತ್ತು. ಇದುವರೆಗೆ 77,253 ರೈತರ ಖಾತೆಗೆ ಒಟ್ಟು 559.56 ಕೋಟಿ ರೂ. ಜಮೆಯಾಗಿದೆ. ಸಾಲಮನ್ನಾ ಸೌಲಭ್ಯ ಪಡೆಯಲು ರೈತರು ತಮ್ಮ ಜಮೀನಿನ ವಿವರ, ಆಧಾರ್ ಕಾರ್ಡ್, ಪಡಿತರ ಚೀಟಿ, ಕುಟುಂಬದ ಸದಸ್ಯರ ವಿವರ ಸಹಿತ ಅಗತ್ಯ ದಾಖಲೆಗಳನ್ನು ಸರ್ಕಾರದ ಪೋರ್ಟಲ್‌ಗೆ ಅಪ್‌ಲೋಡ್ ಮಾಡಬೇಕಿತ್ತು. ರೈತರು ಸಲ್ಲಿಸಿದ ಎಲ್ಲ ದಾಖಲೆಗಳು ತಾಳೆಯಾದರೆ ಅರ್ಹ ರೈತರ ‘ಹಸಿರು ಪಟ್ಟಿ’ ಎಂದು ವರ್ಗೀಕರಣಗೊಂಡು ತಂತ್ರಾಶದಲ್ಲಿಯೇ ಲಭ್ಯವಾಗಿತ್ತು. ಅಂಥವರ ಖಾತೆಗೆ ತಕ್ಷಣ ಹಣ ಜಮೆಯಾಗಿದೆ. ದಾಖಲೆಯಲ್ಲಿ ಸಣ್ಣ ವ್ಯತ್ಯಾಸ ಇದ್ದರೂ, ಅಂತಹ ಅರ್ಜಿ ತಿರಸ್ಕೃತವಾಗಿತ್ತು.
ಸಮಿತಿ ಪರಿಶೀಲನೆ: ರೈತನ ಹೆಸರು, ಇನಿಶಿಯಲ್ ಮುಂತಾದ ವ್ಯತ್ಯಾಸದಿಂದ ಸೌಲಭ್ಯ ವಂಚಿತರಾದವರ ಅರ್ಜಿಗಳನ್ನು ಗ್ರಾ.ಪಂ.ಕಾರ್ಯದರ್ಶಿ ಮಟ್ಟದಲ್ಲಿ ಪರಿಶೀಲನೆಗೆ ಅವಕಾಶವಿತ್ತು. ರೈತನ ಹೆಸರು ದೃಢೀಕರಿಸಿ ಸಾಲಮನ್ನಾ ಸೌಲಭ್ಯಕ್ಕೆ ಅರ್ಹರೆಂದು ಪಂಚಾಯಿತಿ ಕಾರ್ಯದರ್ಶಿ ತಹಸೀಲ್ದಾರ್ ಅಧ್ಯಕ್ಷತೆಯ ತಾಲೂಕುಮಟ್ಟದ ಸಮಿತಿಗೆ ಶಿಫಾರಸು ಮಾಡಬೇಕಿತ್ತು. ತಾಲೂಕು ಸಮಿತಿ ವರದಿ ಸಲ್ಲಿಸಿದ ಬಳಿಕ ಹಸಿರುಪಟ್ಟಿಗೆ ಹೆಸರು ಸೇರ್ಪಡೆಯಾಗುತ್ತಿತ್ತು. ಈ ಪ್ರಕ್ರಿಯೆ ಮೂಲಕ ಬಹುತೇಕ ಅರ್ಜಿಗಳು ಇತ್ಯರ್ಥಗೊಂಡು ರೈತರ ಖಾತೆಗೆ ಹಣ ಜಮೆಯಾಗಿದೆ.
ಸಾಫ್ಟ್‌ವೇರ್ ತೊಡಕು: ರೈತರು ಒದಗಿಸಿದ ಎಲ್ಲ ದಾಖಲೆ ಸಮರ್ಪಕವಾಗಿದ್ದರೂ, ಸಾಫ್ಟ್‌ವೇರ್‌ನಲ್ಲಿ ಕೆಲವು ತೊಡಕಿದ್ದ ಪರಿಣಾಮ ವಿಳಂಬವಾಗಿತ್ತು. ರೈತರು ತಮ್ಮ ಖಾತೆಗೆ ಹಣ ಜಮೆಯಾಗಲು ಐಎಫ್‌ಎಸ್ ಕೋಡ್ ಸಹಿತ ಖಾತೆಯ ಸಂಖ್ಯೆ ನಮೂದಿಸಬೇಕಿತ್ತು. ಆದರೆ ಸಾಫ್ಟ್‌ವೇರ್‌ನಲ್ಲಿ ಐಎಫ್‌ಎಸ್ ಕೋಡ್ ಪೂರ್ತಿ ನಮೂದಿಸಿದರೆ ಅದು ಸ್ವೀಕೃತವಾಗುತ್ತಿರಲಿಲ್ಲ. ಈಗ ತೊಡಕು ನಿವಾರಣೆ ಮಾಡಲಾಗಿದ್ದು, ಸಾಫ್ಟ್‌ವೇರ್ ಅಪ್‌ಡೇಟ್ ಆಗಿದೆ ಎನ್ನುವ ಮಾಹಿತಿ ಇದೆ.
ಸಾಲಮನ್ನಾ ಬಿಡುಗಡೆ
ಜಿಲ್ಲೆ ಫಲಾನುಭವಿಗಳು ಮೊತ್ತ
ದ.ಕ. 56755 419.25 ಕೋಟಿ ರೂ.
ಉಡುಪಿ 20498 140.31 ಕೋಟಿ ರೂ.
ಒಟ್ಟು 77253 559.56 ಕೋಟಿ ರೂ.
ಬಿಡುಗಡೆಗೆ ಬಾಕಿ
ಜಿಲ್ಲೆ ರೈತರು ಮೊತ್ತ
ದ.ಕ. 10865 107.22 ಕೋಟಿ ರೂ.
ಉಡುಪಿ 3632 38.32 ಕೋಟಿ ರೂ.
ಒಟ್ಟು 14497 145.54 ಕೋಟಿ ರೂ.
ದಾಖಲೆಗಳು ತಾಳೆಯಾಗದ ಕಾರಣ ಕೆಲವು ರೈತರ ಖಾತೆಗೆ ಹಣ ಜಮೆಯಾಗಲು ವಿಳಂಬವಾಗಿದೆ. ಇಲಾಖೆಯ ಸಾಫ್ಟ್‌ವೇರ್‌ನಲ್ಲಿ ಕೂಡ ಕೆಲವು ತೊಡಕುಗಳಿದ್ದವು. ಈಗ ಎಲ್ಲ ತೊಡಕು ನಿವಾರಣೆಯಾಗಿದೆ. ಅವಿಭಜಿತ ದ.ಕ.ಜಿಲ್ಲೆಯಲ್ಲಿ 145.54 ಕೋಟಿ ರೂ.ಬಾಕಿಯಿದ್ದು, ಶೀಘ್ರ ಸಂಬಂಧಪಟ್ಟವರ ಖಾತೆಗೆ ಜಮೆಯಾಗಲಿದೆ.
-ಮಂಜುನಾಥ ಸಿಂಗ್, ಸಹಾಯಕ ನಿಬಂಧಕರು, ಸಹಕಾರಿ ಇಲಾಖೆ