ಸಾಲಬಾಧೆಗೆ ದಂಪತಿ ಆತ್ಮಹತ್ಯೆ

3e76ab56-ecf5-4db6-b420-4ddd1eae349e
Published on

ಬಾಗಲಕೋಟೆ: ಸಾಲಬಾಧೆಯಿಂದ ಬೇಸತ್ತು ದಂಪತಿ ಘಟಪ್ರಭಾ ನದಿ ಸೇತುವೆಯ ಕಣ್ಣಿದ ಸರಳಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಧೋಳ ತಾಲೂಕಿನ ಲೋಕಾಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಸೇತುವೆಯಲ್ಲಿ ಗುರುವಾರ ನಡೆದಿದೆ.

ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ನೆಲೆಸಿದ್ದ ಮಲ್ಲಪ್ಪ ಲಾಳಿ(೫೫) ಹಾಗೂ ಮಾದೇವಿ ಲಾಳಿ(೫೦) ಮೃತ ದುರ್ದೈವಿ ದಂಪತಿ ಎಂದು ಗುರುತಿಸಲಾಗಿದೆ. ಮಲ್ಲಪ್ಪ ಅವರು ಡತ್ ನೋಟ್ ಬರೆದು ಜೇಬಿನಲ್ಲಿ ಇಟ್ಟುಕೊಂಡು ನೇಣಿಗೆ ಶರಣಾಗಿದ್ದಾರೆ.

ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಮಲ್ಲಪ್ಪ ಅವರು, ದೊಡ್ಡ ಅಂಗಡಿಗಳಲ್ಲಿ ಸಾಲ ಮಾಡಿ ದಾಸ್ತಾನು ಖರೀದಿ ಮಾಡಿದ್ದೆ. ಅದನ್ನು ಊರಲ್ಲಿ ಸಣ್ಣಪುಟ್ಟದಾಗಿ ಮಾರಾಟ ಮಾಡಿದ್ದೆ. ನನ್ನ ಕಡೆಗೆ ಸಾಲವಾಗಿ ವಸ್ತುಗಳನ್ನು ಖರೀದಿ ಮಾಡಿದ್ದರಿಂದ ನನಗೆ ಹಣ ವಸೂಲಿ ಮಾಡಲು ಆಗಲಿಲ್ಲ. ಇದರಿಂದ ನಾನು ಬೇರೆಯವರ ಕಡೆಗೆ ಸಾಲ ಮಾಡಿ ವಸ್ತು ಖರೀದಿಸಿದ್ದು, ಅವರಿಗೆ ಮರಳಿ ಹಣ ಕೊಡಲು ಸಾಧ್ಯವಾಗಲಿಲ್ಲ. ೨೦ಕ್ಕೂ ಹೆಚ್ಚು ಜನರು ಕಡೆಗೆ ಕೈಸಾಲ ಮಾಡಿದ್ದು, ಸಾಲ ತೀರಿಸಲಾಗದೇ ಇದೀಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಕ್ಷಮೆ ಕೋರುತ್ತೇನೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಮಲ್ಲಪ್ಪ ಅವರ ಪುತ್ರ ಇದೀಗ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಸಾವಿನಲ್ಲಿ ಅನುಮಾನ ಇದೆ ಎಂದು ದೂರು ನೀಡಿದ್ದಾರೆ. ಮೃತರ ಕುಟುಂಬದವರು ನೀಡಿರುವ ಹೇಳಿಕೆ ಆಧರಿಸಿ ಇದೀಗ ತನಿಖೆ ಕೈಗೊಳ್ಳಲಾಗಿದೆ. ಎಷ್ಟು ಸಾಲ ಮಾಡಿಕೊಂಡಿದ್ದಾರೆ, ಯಾರ ಬಳಿ ಎಷ್ಟೆಷ್ಟು? ಹಾಗೂ ತಮಗೆ ಯಾರು ಯಾರು ದುಡ್ಡು ಕೊಡಬೇಕಿತ್ತು ಎನ್ನುವ ಯಾವುದೇ ಮಾಹಿತಿಯನ್ನು ಸಹ ಡೆತ್ ನೋಟ್‌ನಲ್ಲಿ ನಮೂದಿಸಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net