ಸಾಲದ ಹಣ ಸದುಪಯೋಗವಾಗಲಿ

20KMD-1
Published on

ಕೆ.ಎಂ.ದೊಡ್ಡಿ: ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥಾಪಕ ಡಾ.ವಿರೇಂದ್ರ ಹೆಗ್ಗಡೆ ಶ್ರಮಿಸುತ್ತಿದ್ದಾರೆ ಎಂದು ಮನ್‌ಮುಲ್ ನಿರ್ದೇಶಕ, ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ ತಿಳಿಸಿದರು.


ಇಲ್ಲಿನ ಅಲಭುಜನಹಳ್ಳಿ ರಸ್ತೆಯ ಜೆಎಂ ಕನ್ವೆನ್ಷನ್ ಹಾಲ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಭಾರತೀನಗರ ವಲಯದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ವೀರೇಂದ್ರ ಹೆಗಡೆ ಅವರ ಶ್ರಮ ಸಾರ್ಥಕವಾಗಬೇಕಾದರೆ ಮಹಿಳೆಯರು ಸಾಲ ಪಡೆದ ಹಣ ದುರುಪಯೋಗ ಆಗದಂತೆ ಎಚ್ಚರ ವಹಿಸಿ, ಆ ಹಣದಿಂದ ಸ್ವಉದ್ಯೋಗ ಕಂಡುಕೊಳ್ಳಬೇಕು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಅಣ್ಣೂರು ರಾಜೀವ್ ಮಾತನಾಡಿ, ಧರ್ಮದ ಹಾದಿ ಹಿಡಿಯುವವರು ಎಲ್ಲರಿಂದಲೂ ಶ್ರೇಷ್ಠ ಎಂಬುವುದಕ್ಕೆ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಸಾಕ್ಷಿ ಎಂದರು.
ಮಹಿಳಾ ಸ್ವಸಹಾಯ ಸಂಘಗಳು ಸಾಲ ಪಡೆದು ನಿಯತ್ತಿನಿಂದ ಕಟ್ಟುತ್ತಿವೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ಮಾತ್ರ ಸಾಲ ನೀಡುತ್ತಿದ್ದು, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿದೆ ಎಂದು ಶ್ಲಾಸಿದರು.


ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕನಕಪುರ ತಾಲೂಕು ಗುರುವಿನಪುರ ಮಠದ ಜಗದೀಶ್ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ದಾರಿದೀಪವಾಗಿದೆ. ಹೆಚ್ಚು ಮಹಿಳೆಯರು ಅನಕ್ಷರಸ್ಥರಾಗಿದ್ದು, ಅಕ್ಷರ ಬಲ್ಲವರಿಗಿಂತ ಹೆಚ್ಚು ಬುದ್ಧಿವಂತರಾಗಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡಲಾಗುವ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಹೇಗೆ ಸ್ವಾವಲಂಬನೆ ಸಾಧಿಸಬೇಕೆಂಬ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಆ ದಾರಿಯಲ್ಲಿ ಮುಂದೆ ಸಾಗುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ನಿರ್ಗತಿಕ ಮಹಿಳೆಯರಿಬ್ಬರಿಗೆ ಮಾಸಾಶನ ಹಾಗೂ ಅಂಗವಿಕಲರೊಬ್ಬರಿಗೆ ತ್ರಿಚಕ್ರ ಸೈಕಲ್ ವಿತರಿಸಲಾಯಿತು.


ಗ್ರಾಪಂ ಅಧ್ಯಕ್ಷ ವಕ್ರತುಂಡ ವೆಂಕಟೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಮಂಡ್ಯ ಸರ್ಕಾರಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕಿ ಡಾ.ಎಸ್.ಬಿ. ಜ್ಯೋತಿ, ಯೋಜನೆಯ ಯೋಜನಾಧಿಕಾರಿ ಸುವರ್ಣ ಭಟ್ ಮೇಲ್ವಿಚಾರಕ್ಕೆ ಚಿತ್ರಾವತಿ, ಜೆಎಂ ಕನ್ವೆನ್ಷನ್ ಹಾಲ್ ಸುಜಾತಾ ಹೇಮರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net