ಸಾಲದ ಶೂಲ ಪರ-ವಿರೋಧದ ಕೋಲಾಹಲ

13rajesh3
Published on

ಚಾಮರಾಜನಗರ: ಖಾಸಗಿ ಮೈಕ್ರೋ ೈನಾನ್ಸ್‌ಗಳಿಂದ ಸಾಲಪಡೆದುಕೊಂಡವರು, ೈನಾನ್ಸ್‌ಗಳ ಕಿರುಕುಳವನ್ನು ತಾಳಲಾರದೇ ಊರುಬಿಟ್ಟಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲೇ ಪರ-ವಿರೋಧದ ಚರ್ಚೆ ಜೋರಾಗಿದೆ.

ತಾಲೂಕಿನ ಹೆಗ್ಗವಾಡಿಪುರ ಗ್ರಾಮದಲ್ಲಿ ಚರ್ಚೆಯ ಕಾವು ಭಿನ್ನ-ವಿಭಿನ್ನವಾಗಿದೆ. ಈಗಾಗಲೇ ತಹಸೀಲ್ದಾರ್ ಗಿರಿಜಾ ಅವರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೀಡಿರುವ ಮಾಹಿತಿಯ ಪ್ರಕಾರ, ಹೆಗ್ಗವಾಡಿ ಗ್ರಾಮದಲ್ಲಿ 1 ಕುಟುಂಬ ಮತ್ತು ದೇಶವಳ್ಳಿ ಗ್ರಾಮದಲ್ಲಿ 2 ಕುಟುಂಬಗಳು ೈನಾನ್ಸ್‌ಗಳ ಕಿರುಕುಳಕ್ಕೆ ಹೆದರಿ ಊರುಬಿಟ್ಟಿರುವುದು ಕಂಡುಬಂದಿದೆ. ಯಾರೋ ಒಂದೋ, ಎರಡೋ ಕುಟುಂಬಗಳು ಆರ್ಥಿಕ ಶಿಸ್ತು ಇಲ್ಲದೇ ಮಾಡಿದ ಸಮಸ್ಯೆಯಿಂಧ ಗ್ರಾಮಕ್ಕೆ ಕೆಟ್ಟ ಹೆಸರನ್ನು ತಂದಿದೆ ಎಂದು ಪ್ರಕರಣದ ಕುರಿತು ಗ್ರಾಮಸ್ಥರು ಬೇಸರ ಹೊರಹಾಕಿದ್ದಾರೆ.

ಸಾಲ ಕಟ್ಟಲಾರದೇ ಸಂಕಷ್ಟದಲ್ಲಿರುವ ಕುಟುಂಬದ ಪರವಾಗಿ ನಿಂತಿರುವ ಕೆಲವು ಮುಖಂಡರು ಖಾಸಗಿ ೈನಾನ್ಸ್‌ಗಳು ನೀಡುವ ಕಿರುಕುಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಗ್ರಾಮಸಭೆಯನ್ನು ನಡೆಸಲು ತೀರ್ಮಾನಿಸಲಾಗಿದ್ದು, ಈ ಸಮಸ್ಯೆಗೆ ಗ್ರಾಮಸಭೆಯಲ್ಲಿ ಯಾವ ಉತ್ತರ ಕಂಡುಕೊಳ್ಳುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಈ ನಿಟ್ಟಿನಲ್ಲಿ ಹೆಗ್ಗಾವಾಡಿ ಗ್ರಾಮಸ್ಥರು, ಮುಖಂಡರು ಹಾಗೂ ಅಧಿಕಾರಿ ವರ್ಗದಿಂದ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

*ಇಡೀ ಗ್ರಾಮವೇ ಊರು ತೊರೆದಿಲ್ಲ

ಗ್ರಾಮದಲ್ಲಿ ಒಂದೋ-ಎರಡೋ ಕುಟುಂಬಗಳು ಸಾಲ ಕಟ್ಟಲು ಸಮಸ್ಯೆಯಾಗಿ ತೊಂದರೆ ಅನುಭವಿಸುವುದನ್ನು, ಇಡೀ ಗ್ರಾಮದ ನೂರಾರು ಕುಟುಂಬಗಳು ಮನೆ ತೊರೆದು ಹೋಗಿದೆ ಎಂದು ಊರಿಗೆ ಕೆಟ್ಟ ಹೆಸರು ಬರುವಂತೆ ಬಿಂಬಿಸಿರುವುದು ಖಂಡನಾರ್ಹ. ಮೈಕ್ರೋ ಫೈನಾನ್ಸ್‌ಗಳಿಂದ ಶೇ.98 ರಷ್ಟು ಜನರು ಅನುಕೂಲ ಪಡೆದುಕೊಂಡಿದ್ದಾರೆ. ಆದರೇ ಶೇ.2 ರಷ್ಟು ಜನರು ಆರ್ಥಿಕ ಅಶಿಸ್ತಿನಿಂದಾಗಿ ಸಮಸ್ಯೆ ಅನುಭವಿಸುವಂತಾಗಿದೆ. ಅವರ ವೈಯಕ್ತಿಕ ಕಾರಣಗಳ ಬಗ್ಗೆ ತಳಮಟ್ಟದಲ್ಲಿ ತನಿಖೆಯಾಗಬೇಕು.

ಶಿವಕುಮಾರ್, ಮುಖಂಡ, ಹೆಗ್ಗವಾಡಿಪುರ, ಚಾಮರಾಜನಗರ

*ಸರ್ಕಾರ ಗಂಭೀರವಾಗಿ ಪರಿಗಣಿಸಿ

ನಮ್ಮ ಭಾಗದಲ್ಲಿ ಖಾಸಗಿ ಫೈನಾನ್ಸ್‌ಗಳ ಹಾವಳಿ ಮಿತಿಮೀರಿದೆ. ಅದಕ್ಕೆ ಕಡಿವಾಣ ಹಾಕದೇ ಇದ್ದರೇ ಗ್ರಾಮೀಣ ಜನರ ಬದುಕು ಕಷ್ಟವಾಗುತ್ತದೆ. ಫೈನಾನ್ಸ್ ನವರು ಗೂಂಡಾಗಳ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿತ್ತು. ಊರಿನಲ್ಲಿ ಎಲ್ಲರೂ ಹೋಗಿಲ್ಲದಿದ್ದರೂ, ಸಮಸ್ಯೆಯಾದವರು ಗ್ರಾಮವನ್ನು ತೊರೆದಿದ್ದಾರೆ. ಈ ನಿಟ್ಟಿನಲ್ಲಿ ಸಾಲ ಕಟ್ಟಲು ಆಗದವರ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ, ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಅವರಿಗೆ ಸುಲಭದ ರೀತಿಯಲ್ಲಿ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ಇದನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು.

ಮಹೇಶ್ ಕುಮಾರ್, ರೈತ ಮುಖಂಡ, ಹೆಗ್ಗವಾಡಿಪುರ, ಚಾಮರಾಜನಗರ

*ಕುಟುಂಬಸ್ಥರಿಗೆ ಧೈರ್ಯ ತುಂಬಲಾಗಿದೆ

ಹೆಗ್ಗವಾಡಿಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್‌ನವರ ಕಿರುಕುಳದಿಂದಾಗಿ ಒಂದೆರೆಡು ಕುಟುಂಬಗಳು ಗ್ರಾಮವನ್ನು ಬಿಟ್ಟು ಹೋಗಿದ್ದಾರೆ. ಅದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಈಗಾಗಲೇ ತಹಸೀಲ್ದಾರ್ ಅವರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿ ಕುಟುಂಬಗಳಿಗೆ ಧೈರ್ಯ ತುಂಬಿದ್ದಾರೆ. ಫೈನಾನ್ಸ್‌ನವರು ಸಾಲ ವಸೂಲಿ ಮಾಡಲು ಜನರಿಗೆ ಕಿರುಕುಳ ನೀಡಬಾರದು. ಗುಳೆ ಹೋಗಿರುವ ಕುಟುಂಬವನ್ನು ವಾಪಾಸ್ ಕರೆತರುವ ಪ್ರಯತ್ನ ಮಾಡುತ್ತೇವೆ.

ಶಿವಕುಮಾರ್, ಸದಸ್ಯ, ಗ್ರಾಮ ಪಂಚಾಯಿತಿ, ಹೆಗ್ಗವಾಡಿಪುರ

*ಕಿರುಕುಳ ನೀಡಬಾರದು

ದೇಶವಳ್ಳಿ ಗ್ರಾಮದಲ್ಲಿ ಮೂರು ಕುಟುಂಬದವರು ಖಾಸಗಿ ಫೈನಾನ್ಸ್ ಹಾವಳಿಯಿಂದ ಊರು ಬಿಟ್ಟಿದ್ದಾರೆ. ಇದು ಎಲ್ಲಾ ಗ್ರಾಮಗಳಲ್ಲೂ ಕಂಡು ಬರುವ ಸಮಸ್ಯೆಯಾಗಿದೆ. ಸೂಕ್ತ ಉದ್ಯೋಗ ದೊರೆಯದ ಕಾರಣ ಜನರು ಸಾಲ ಮರುಪಾವತಿಸಲು ಸಮಸ್ಯೆ ಅನುಭವಿಸುತ್ತಿದ್ದಾರೆ. ಖಾಸಗಿ ಮೈಕ್ರೋ ಫೈನಾನ್ಸ್‌ಗಳು ಸಾಲವನ್ನು ವಸೂಲಿ ಮಾಡುವ ರೂಪದಲ್ಲಿ ಜನರಿಗೆ ಕಿರುಕುಳವನ್ನು ನೀಡಬಾರದು. ಅವರಿಗೆ ಸಾಲವನ್ನು ಮರುಪಾವತಿಸಲು ಕಾಲಾವಕಾಶವನ್ನು ಕೊಡಬೇಕು.

ಡಿ.ಪಿ.ರಾಜು, ಮಾಜಿ ಸದಸ್ಯ, ಗ್ರಾಮ ಪಂಚಾಯಿತಿ, ಹೆಗ್ಗವಾಡಿಪುರ

*ಗ್ರಾಮಕ್ಕೆ ಕೆಟ್ಟ ಹೆಸರು

ಮಹಿಳಾ ಸ್ವಸಹಾಯ ಸಂಘಗಳು, ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಸೌಲಭ್ಯ ನೀಡಿರುವುದರಿಂದ ಅನುಕೂಲವಾಗಿದೆ. ಸಾಲ ಕಟ್ಟಲಾಗದರಿಂದ ಈ ರೀತಿ ಗ್ರಾಮಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಭಾವಿಸಿರಲಿಲ್ಲ. ಒಂದೋ ಎರಡೋ ೈನಾನ್ಸ್‌ಗಳಾದೆ ಸರಿ ಆದರೆ ಎಲ್ಲ ಫೈನಾನ್ಸ್‌ಗಳಲ್ಲೂ ಸಾಲ ಪಡೆದುಕೊಂಡು, ಮರು ಪಾವತಿಸಲು ಸಮಸ್ಯೆ ಅನುಭವಿಸುತ್ತಿದ್ದಾರೆ. ಆರ್ಥಿಕವಾಗಿ ಸಾಕಷ್ಟು ಜ್ಞಾನವಿದ್ದರೆ, ನಿರಂತರವಾಗಿ ದುಡಿಮೆ ಇದ್ದರೆ ಈ ಸಮಸ್ಯೆ ತಲೆದೋರುವುದಿಲ್ಲ .

ನೀಲಮ್ಮ, ಹೆಗ್ಗವಾಡಿಪುರ, ಚಾಮರಾಜನಗರ

*ಗ್ರಾಮಸಭೆ ಮಾಡಲು ನಿರ್ಧಾರ

ಹೆಗ್ಗವಾಡಿಪುರ ಮತ್ತು ದೇಶವಳ್ಳಿ ಗ್ರಾಮದಲ್ಲಿ ನೂರಾರು ಜನರು ಮನೆಬಿಟ್ಟು ಹೋಗಿದ್ದಾರೆ ಎಂಬುದೆಲ್ಲಾ ಸುಳ್ಳು. ಯಾರು ಕೂಡ ಈ ಬಗ್ಗೆ ದೂರು ನೀಡಿಲ್ಲ. ಆದರೇ ಒಂದೆರೆಡು ಕುಟುಂಬಗಳು ಸಂಕಷ್ಟದಲ್ಲಿ ಇರುವುದು ಈಗಷ್ಟೇ ಬೆಳಕಿಗೆ ಬಂದಿದೆ. ಈಗಾಗಲೇ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸಲು ಚಿಂತಿಸಲಾಗಿದೆ.

ಎಸ್.ರಾಜು, ಗ್ರಾ.ಪಂ ಸದಸ್ಯ, ದೇಶವಳ್ಳಿ

*ಸೂಕ್ತ ತನಿಖೆ ಆಗಲಿ

ಗ್ರಾಮದಲ್ಲಿ ನೂರಾರು ಕುಟುಂಬಗಳು ಖಾಸಗಿ ಫೈನಾನ್ಸ್ ಕಿರುಕುಳ ದಿಂದ ಗುಳೆ ಹೋಗಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿದೆ. ಒಂದೆರೆಡು ಕುಟುಂಬಗಳಿಗೆ ತೊಂದರೆ ಆಗಿರುವುದು ನಿಜ, ಅದಕ್ಕೆ ಇಡೀ ಗ್ರಾಮವೇ ಗುಳೆ ಹೋಗಿದೆ ಎಂದು ಬಿಂಬಿಸಬಾರದು. ತಮ್ಮ ಪ್ರತಿಷ್ಠೆಗಾಗಿ ಕೆಲವರು ಇಂತಹ ಸಮಸ್ಯೆಗಳನ್ನು ಹುಟ್ಟು ಹಾಕುತ್ತಾರೆ. ಇದರಿಂದ ಉಳಿದ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗುತ್ತದೆ. ಈ ಕುರಿತು ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಡ ಕುಟುಂಬಗಳು ಸಾಲ ಪಡೆಯಲು ಸಾಧ್ಯವೇ ಇಲ್ಲ. ಅಂತವರಿಗೆ ಫೈನಾನ್ಸ್‌ಗಳಲ್ಲಿ ಸುಲಭವಾಗಿ ಸಾಲ ದೊರೆಯುತ್ತಿದೆ.

ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ, ರಾಜ್ಯ ರೈತ ಸಂಘ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net