

ತುಮಕೂರು: ಕೇಂದ್ರ ಸರ್ಕಾರದ ವಿವಿಧ ಸಾಲ ಯೋಜನೆಯಡಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡದೆ ಹೆಚ್ಚು ಕಾಲ ಬಾಕಿ ಉಳಿಸಿಕೊಳ್ಳುವ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಾಕೀತು ಮಾಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ(ಡಿಎಲ್ಆರ್ಸಿ) ಹಾಗೂ ಜಿಲ್ಲಾ ಸಮಾಲೋಚನಾ ಸಭೆಯಲ್ಲಿ 2025-&26ನೇ ಸಾಲಿನ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಸಾಲಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೆ ತ್ವರಿತ ವಿಲೇವಾರಿ ಮಾಡುವಂತೆ ತಿಳಿಸಿದರು.
2024&-25ರ ಸಾಲ ಯೋಜನೆಯಲ್ಲಿ ಶೇ.111 ಸಾಲವನ್ನು ಆದ್ಯತಾ ವಲಯದಲ್ಲಿ ವಿತರಿಸಿರುವುದು ಉತ್ತಮ ಬೆಳವಣಿಗೆ. ಅದೇ ರೀತಿ 2025-&26ರ ಸಾಲಿನಲ್ಲಿಯೂ ಗುರಿ ಮೀರಿ ಪ್ರಗತಿ ಸಾಧಿಸಬೇಕು. ಜಿಲ್ಲೆಯಲ್ಲಿ ಮಾರ್ಚ್ ಅಂತ್ಯಕ್ಕೆ ಸಿಡಿ ಅನುಪಾತ (ಸಾಲ-ಠೇವಣಿ ಅನುಪಾತ) ಶೇ.105ರಷ್ಟಿದ್ದು, ಈ ಅನುಪಾತವನ್ನು ಪ್ರಸ್ತುತ ಸಾಲಿನಲ್ಲೂ ಮುಂದುವರಿಸಬೇಕು ಎಂದರು.
ವಿಶ್ವಕರ್ಮ ಸಾಲ ಶೀಘ್ರ: ಪ್ರಸ್ತುತ ಪಿಎಂ ವಿಶ್ವಕರ್ಮ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ಸಾಲ ವಿತರಿಸಬೇಕು. ಯೋಜನೆಯ ಪ್ರಯೋಜನವನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತೆ ಜನಜಾಗೃತಿ ಮೂಡಿಸುವಂತೆ ಸೋಮಣ್ಣ ತಿಳಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ರೈತರು, ಸಾಮಾನ್ಯ ಜನರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಮಾಹಿತಿಯೇ ಇರುವುದಿಲ್ಲ. ಸಾಲ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಸ್ವಯಂ ಉದ್ಯೋಗ ಕೈಗೊಳ್ಳಲು ಯುವಕ/ಯುವತಿಯರಿಗೆ ತರಬೇತಿ ನೀಡಬೇಕು. ಇದರಿಂದ ನಿರುದ್ಯೋಗ ಸಮಸ್ಯೆಯನ್ನು ದೂರ ಮಾಡಬಹುದು. ಪ್ರಸಕ್ತ ಸಾಲ ಯೋಜನೆಯಡಿ ಕೃಷಿ, ಕೃಷಿ ಮೂಲ ಸೌಕರ್ಯ, ಕೃಷಿ ಪೂರಕ ಚಟುವಟಿಕೆ; ಸಣ್ಣ ಹಾಗೂ ಮಧ್ಯಮ ಕೈಗಾರಿಕೆ; ಶೈಕ್ಷಣಿಕ; ಗೃಹ; ವ್ಯಾಪಾರ ಮತ್ತು ಇತರೆ ಸೇವೆಗಳಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ನಬಾರ್ಡನ ಸಹಾಯಕ ಪ್ರಧಾನ ವ್ಯವಸ್ಥಾಪಕ ಮತ್ತು ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೆ.ಮೋಹನ್ ಸಾಯಿ ಗಣೇಶ್, ಜಿಪಂ ಯೋಜನಾ ನಿರ್ದೇಶಕ ನಾರಾಯಣಪ್ಪ, ಜಿಲ್ಲೆಯ ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ಟಿ.ಕೆ.ಸುರೇಂದ್ರ, ದೊರೈರಾಜ್, ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಗಣೇಶ್ ಗುಂಜನ್ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಹಕರೊಂದಿಗೆ ಪ್ರಾದೇಶಿಕ ಭಾಷೆಯಲ್ಲಿಯೇ ಬ್ಯಾಂಕಿನ ಅಧಿಕಾರಿ, ಸಿಬ್ಬಂದಿ ವ್ಯವಹರಿಸಿ, ಸೌಜನ್ಯಯುತವಾಗಿ ವರ್ತಿಸಿ ಬ್ಯಾಂಕಿನ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕು. ಬ್ಯಾಂಕಿನ ವ್ಯವಸ್ಥಾಪಕರು ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲವೆಂಬ ಸಾಕಷ್ಟು ದೂರುಗಳು ಜನರಿಂದ ವ್ಯಕ್ತವಾಗುತ್ತಿವೆ ಎಂದು ಜಿಲ್ಲಾಧಿಕಾರಿ ಶುಭಾಕಲ್ಯಾಣ್ ನಿರ್ದೇಶಿಸಿದರು.
ಸಭೆಗೆ ಗೈರಾದ ಬ್ಯಾಂಕುಗಳಿಗೆ ನೋಟಿಸ್ ನೀಡಲಾಗುವುದು. ಇದೇ ರೀತಿ ಗೈರಾಗುವುದು ಪುನರಾವರ್ತಿತವಾದರೆ ಕೇಂದ್ರ ಸಚಿವರಿಗೆ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ಜಿಪಂ ಸಿಇಒ ಜಿ.ಪ್ರಭು ಎಚ್ಚರಿಸಿದರು. ಆರ್ಬಿಐ ಸಹಾಯಕ ಪ್ರಧಾನ ವ್ಯವಸ್ಥಾಪಕ ಆರ್.ಪ್ರಭಾಕರನ್ ಪ್ರತಿಕ್ರಿಯಿಸಿ, ಸಭೆಗೆ ಬ್ಯಾಂಕಿನ ಅಧಿಕಾರಿಗಳ ಗೈರಾಗುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಗೈರಾಗಿರುವ ಬ್ಯಾಂಕಿನ ಅಧಿಕಾರಿಗಳು ಮುಂದಿನ ಸಭೆಗೆ ಕಡ್ಡಾಯವಾಗಿ ತಮ್ಮ ವಲಯ ವ್ಯವಸ್ಥಾಪಕರೊಂದಿಗೆ ಸಭೆಗೆ ಹಾಜರಾಗತಕ್ಕದ್ದು ಎಂದು ಸೂಚಿಸಿದರು.
2025-&26ನೇ ಸಾಲಿಗೆ ಒಟ್ಟು 17,734 ಕೋಟಿ ರೂ. ಸಾಲ ಯೋಜನೆ ರೂಪಿಸಲಾಗಿದ್ದು, ಆದ್ಯತಾ ವಲಯದ ಸಾಲಗಳಿಗೆ 13,219 ಕೋಟಿ ರೂಪಾಯಿ ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕೃಷಿ ಹಾಗೂ ಪೂರಕ ಚಟುವಟಿಕೆಗಳಿಗೆ 9819 ಕೋಟಿ ರೂ. ಹಾಗೂ ಗುಡಿ ಕೈಗಾರಿಕೆ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ವಲಯಕ್ಕಾಗಿ ವಲಯಕ್ಕೆ 3041 ಕೋಟಿ ರೂ.,ಗಳಷ್ಟು ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಚೈತನ್ಯ ಕಂಚೀಬೈಲ್ ಸಭೆಗೆ ಮಾಹಿತಿ ನೀಡಿದರು.